ಬಂಟ್ವಾಳ: ಜಿಲ್ಲಾಡಳಿತ, ಬಂಟ್ವಾಳ ಪುರಸಬೆಯ ದಬ್ಬಾಳಿಕೆ ಹಾಗು ಪೊಲೀಸ್ ದೌರ್ಜನ್ಯ ವಿರೋದಿಸಿ ಸಜೀಪ ನಡು ಪೇಟೆ ಇಂದು ಸ್ವಯಂ ಪ್ರೇರಿತರಾಗಿ ಸಂಪೂರ್ಣ ಬಂದ್ ಮಾಡಿದ್ದಾರೆ.
ಬುಧವಾರ ಸಂಜೆ ಸ್ಥಳೀಯರ ವಿರೋಧದ ನಡುವೆಯೂ ಪೋಲೀಸ್ ಸರ್ಪಗಾವಲಿನಲ್ಲಿ ಒಂದು ಲಾರಿ ಲೋಡ್ ಒಣ ಕಸವನ್ನು ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಗಕ್ಕೆ ಡಂಪ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸಿದ ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸಿರ್ ಸಹಿತ ಗ್ರಾಮಸ್ಥರನ್ನು ಪೋಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಗೊಳಿಸಿದರು.
ನ್ಯಾಯಾಲಯದ ಆದೇಶದ ಮೇರೆಗೆ ತ್ಯಾಜ್ಯ ಸಂಸ್ಕರಿಸಲು ಎ.ಸಿ.ಅದೇಶದಂತೆ ಬುಧವಾರ ತ್ಯಾಜ್ಯ ಡಂಪ್ ಮಾಡಲಾಯಿತು.



ತ್ಯಾಜ್ಯ ಸಂಸ್ಕರಿಸಲು ನಮ್ಮ ವಿರೋಧವಿಲ್ಲ ಆದರೆ ವೈಜ್ಞಾನಿಕ ಮಾದರಿಯಲ್ಲಿ ಹಾಗೂ ಪರಿಸರ ಇಲಾಖೆಯ ನಿಬಂಧನೆಗಳನ್ನು ಮತ್ತು ಇಲ್ಲಿನ ಜನರ ಜನಪರ ಬೇಡಿಕೆಯನ್ನು ಈಡೇರಿಸಿ ಬಳಿಕ ತ್ಯಾಜ್ಯ ಡಂಪ್ ಮಾಡುವಂತೆ ಸ್ಥಳೀಯರ ಒತ್ತಾಯವಾಗಿತ್ತು.
ಆದರೆ ನ್ಯಾಯಾಲಯದ ಆದೇಶ ಅನೇಕ ವರ್ಷಗಳ ಹಿಂದೆಯೇ ಆಗಿತ್ತಾದರೂ ಇಲ್ಲಿನ ಪುರಸಭಾ ಇಲಾಖೆ ಸ್ಥಳೀಯರ ಬೇಡಿಕೆ ಈಡೇರಿಕೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಜೊತೆಗೆ ಬುಧವಾರ ಸ್ಥಳೀಯರ ಬೇಡಿಕೆಗಳಿಗೆ ಕಿಂಚಿತ್ತೂ ಬೆಲೆ ಕೊಡದೆ ಅಲ್ಲಿ ಯಾವುದೇ ವೈಜ್ಞಾನಿಕ ರೀತಿಯ ವ್ಯವಸ್ಥೆ ಮಾಡದೆ ನೇರವಾಗಿ ಒಣ ಕಸವನ್ನು ಡಂಪ್ ಮಾಡಿದ್ದಕ್ಕೆ ಅವರ ವಿರೋಧವಾಗಿದೆ.
ಇಂದು ಈ ಘಟನೆಯನ್ನು ಖಂಡಿಸಿ ಇಲ್ಲಿನ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ.












