ವಿಟ್ಲ: ಕೇಪು ಶ್ರೀ ಕೈಲಾಸೇಶ್ವರ ಶಿವ ಕ್ಷೇತ್ರದಲ್ಲಿ ಸಂಕಲ್ಪಿಸಿದಂತೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ನಿರ್‍ಮಾಣಗೊಂಡಿದ್ದು, ಮಾ. 19ರಿಂದ ಮೊದಲ್ಗೊಂಡು 23ರ ತನಕ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ. ಸುತ್ತಮುತ್ತಲಿನ ಹತ್ತು ಗ್ರಾಮದ ಭಕ್ತಾದಿಗಳನ್ನು ಸೇರಿಸಿಕೊಂಡು ದೇವಾಲಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಹೊರೆಕಾಣಿಕೆ ಮೆರವಣಿಗೆ ಅಡ್ಯನಡ್ಕ ಹಾಗೂ ಉಕ್ಕುಡ ಭಾಗದಿಂದ ಸಂಗ್ರಹಿಸಲಿದ್ದು, ಪ್ರತಿಯೊಬ್ಬರೂ ಹೃದಯಪೂರ್ವಕವಾಗಿ ಸಂಘಟಿಸಬೇಕೆಂದು ಖಂಡಿಗ ಕ್ಷೇತ್ರದ ಆಡಳಿತ ಮೊಕ್ತೇಸರ ರವೀಶ್ ಕೆ. ಎನ್. ಖಂಡಿಗ ಹೇಳಿದರು.
ಅವರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ಖಂಡಿಗ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ವಿಟ್ಲ ಅರಮನೆಯ ಕೃಷ್ಣಯ್ಯ ಕೆ., ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಜಯರಾಮ ಬಲ್ಲಾಳ್, ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನಾರಾಯಣ ಯಾನೆ ಬಟ್ಟು ಸ್ವಾಮಿ, ವಿಟ್ಲ ಶ್ರೀ ಭಗವತಿ ದೇವಸ್ಥಾನದ ಮೋನಪ್ಪ ಗುರುಸ್ವಾಮಿ, ಬಾಬು ಕೆ. ವಿ., ಪ್ರವೀಣ್ ವಿಟ್ಲ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ವಿಟ್ಲ ಸೀಮಾ ಭಜನಾ ಪರಿಷತ್‌ನ ಶೀನ ನಾಯ್ಕ ಮಂಗಳಪದವ, ಸಮಿತಿಯ ಸುರೇಶ್ ನಾಯ್ಕ್ ಕೋಡಂದೂರು, ರಾಮ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
