ಬಂಟ್ವಾಳ: ಕಳೆದ 23 ವರ್ಷಗಳಿಂದ ಸೂರಿಕುಮೇರು ಚರ್ಚ್ ಆಡಳಿತ ಮಂಡಳಿ ಮತ್ತು ಸೂರಿಕುಮೇರು ಉದ್ಯಮಿ ಸುಲೈಮಾನ್ ನಡುವಿನ ಖಾಸಗಿ ರಸ್ತೆಯ ವಿವಾದವೊಂದು ಮಾತುಕತೆಯಲ್ಲಿ ಇತ್ಯರ್ಥಗೊಂಡಿದೆ.


ಕಳೆದ ಹಲವು ವರ್ಷಗಳಿಂದ ಖಾಸಗಿ ಮನೆಗೆ ರಸ್ತೆಯೊಂದರ ವಿಚಾರದಲ್ಲಿ ವಿವಾದಗಳು ನಡೆಯುತ್ತಿದ್ದು, ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಗಣ್ಯರು ಮಾತುಕತೆಗೆ ಪ್ರಯತ್ನಿಸಿದರೂ ರಸ್ತೆ ವಿವಾದಕ್ಕೆ ಮುಕ್ತಿ ದೊರೆತಿರಲಿಲ್ಲ.
ಇದೀಗ ಸೂರಿಕುಮೇರು ಚರ್ಚ್ ನ ವಂದನೀಯ ಫಾದರ್ ಗ್ರೆಗರಿ ಪಿರೇರಾ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನ ಮಾತುಕತೆಯಲ್ಲಿ ವಿವಾದ ಬಗೆಹರಿದಿದ್ದು, ತುಳು ಚಿತ್ರನಟ ಚೇತನ್ ರೈ ಮಾಣಿ, ಸೂರಿಕುಮೇರು ಚರ್ಚ್ ಮುಖ್ಯಸ್ಥ ರೋಷನ್ ಬೊನಿಫಾಸ್ ಮಾರ್ಟಿಸ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುದೀಪ್ ಶೆಟ್ಟಿ, ಎಸ್.ಡಿ.ಪಿ.ಐ. ಮಾಜಿ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಯುವ ನಾಯಕ ಹನೀಫ್ ಸಂಕ ಮತ್ತು ವಿಟ್ಲ ಠಾಣಾಧಿಕಾರಿ ವಿನೋದ್ ರೆಡ್ಡಿ ಸಹಕಾರದೊಂದಿಗೆ ರಸ್ತೆ ವಿವಾದ ಇತ್ಯರ್ಥಗೊಂಡು ಸುಲೈಮಾನ್ ರವರ ಮನೆಗೆ ರಸ್ತೆ ಮಾಡುವುದರ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ.
23 ವರ್ಷಗಳಲ್ಲಿ ಮುಗಿಯದ ಸಮಸ್ಯೆಯೊಂದನ್ನು ಮುತುವರ್ಜಿಯಿಂದ ಬಗೆಹರಿಸಿದ ಎಲ್ಲಾ ಗಣ್ಯರಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆಗಳು ವ್ಯಕ್ತವಾಗಿದ್ದು ಸುಲೈಮಾನ್ ರವರು ಸೂರಿಕುಮೇರು ಚರ್ಚ್ ನ ಧರ್ಮ ಗುರುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.













