ಬಂಟ್ವಾಳ: ಮೇಯಲು ಹೋಗಿದ್ದ ಕರುಗಳು ನಾಪತ್ತೆ, ಕರುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಕದ್ದುಕೊಂಡುವ ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವುದು,ಮಾಲೀಕರಿಗೆ ದೊರಕಿದ್ದು, ಇದೀಗ ಕರುಗಳನ್ನು ಪತ್ತೆ ಮಾಡಿಕೊಡಿ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಅಂದಾಜು ರೂ.40 ಸಾವಿರ ಮೌಲ್ಯದ ಎರಡು ಕರುಗಳು ಕಳವಾಗಿದ್ದು,
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಲ್ಲೂರು ನಿವಾಸಿ ಜಗದೀಶ್ ಕುಲಾಲ್ ಅವರು ದೂರು ನೀಡಿದ್ದಾರೆ.ಇವರು 12 ದನ ಕರುಗಳನ್ನು ಸಾಕಿದ್ದು ಅವರಿಗೆ ಸೇರಿದ ಜಾಗದಲ್ಲಿ ದನಗಳನ್ನು ಮೇಯಲು ಬಿಡುತ್ತಿದ್ದು, ಎಂದಿನಂತೆ ಜೂನ್ 28 ರಂದು ಬೆಳಿಗ್ಗೆ 8.30 ಗಂಟೆಗೆ ಹಟ್ಟಿಯಿಂದ ಹಸು ಹಾಗೂ ಕರುಗಳನ್ನು ಮೇಯಲು ಬಿಟ್ಟಿದ್ದರು. ಮೇಯಲು ಬಿಟ್ಟ ಹಸುಗಳ ಪೈಕಿ ಸುಮಾರು 2 ವರ್ಷ ಪ್ರಾಯದ 2 ಗಂಡು ಕರುಗಳು ಮನೆಗೆ ವಾಪಸು ಬಂದಿರುವುದಿಲ್ಲ.
ಕರುಗಳ ಬಗ್ಗೆ ಮನೆಯ ಹತ್ತಿರ ಸುತ್ತ ಮುತ್ತಲೂ ವಿಚಾರಿಸಿದಾಗ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಜಗದೀಶ್ ಅವರು ಹುಡುಕಾಡಿಕೊಂಡು ಹೋಗುವ ವೇಳೆ ಅಮ್ಮುಂಜೆ ಗ್ರಾಮದ, ಕಲಾಯಿ ಹೌಸ್ ಎಂಬಲ್ಲಿ ರಸ್ತೆ ಕಾಣುವಂತೆ ಸಿಸಿ ಕ್ಯಾಮರಾ ಅಳವಡಿಸಿದ್ದನ್ನು ನೋಡಿ ಪರಿಶೀಲಿಸಿದಾಗ ಜೂನ್ 29ರಂದು ಬೆಳಗ್ಗಿನ ಜಾವ ಸಮಯ ಸುಮಾರು 4.30 ಗಂಟೆಗೆ ಇವರಿಗೆ ಸೇರಿದ ಎರಡು ಗಂಡು ಕರುಗಳನ್ನು ಎರಡು ಜನ ವ್ಯಕ್ತಿಗಳು ರಿಡ್ಜ್ ಕಾರಿನಲ್ಲಿ ತುಂಬಿಸಿ ಹೋಗುವ ದೃಶ್ಯಾವಳಿಯು ಸೆರೆಯಾಗಿರುತ್ತದೆ.
ಮೇಯಲು ಹೋಗಿದ್ದ ಕಪ್ಪು ಮೈ ಬಣ್ಣದ ಗಂಡು ಕರು ಹಾಗೂ ಕೆಂಪು ಮೈಬಣ್ಣದ ಗಂಡು ಕರುಗಳನ್ನು ಯಾರೋ ಅಪರಿಚಿತರು ಕಲಾಯಿ ಎಂಬ ಸ್ಥಳದಿಂದ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ 96/2025 ಕಲಂ: 303(2)BNS ಯಂತೆ ಪ್ರಕರಣ ದಾಖಲಾಗಿರುತ್ತದೆ.


