ಬಂಟ್ವಾಳ: ಬಿಸಿರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವಾಂತರದಿಂದ ನರಿಕೊಂಬು ಗ್ರಾಮದ ಕೃಷಿಕನೋರ್ವನ ಕೃಷಿ ಮಣ್ಣುಪಾಲಾಗಿದ್ದು, ಬದುಕಿಗೆ ಆಸರೆಯಾಗಿದ್ದ ಅಡಿಕೆ ತೋಟ ನಾಶವಾಗಿದೆ, ಅರ್ಥಿಕ ಸಂಕಷ್ಟದಲ್ಲಿ ದಿನಕಳೆಯುವ ಕೃಷಿಕನ ಸಮಸ್ಯೆಗೆ ಪರಿಹಾರ ನೀಡಿ ಎಂದು ಗ್ರಾ.ಪಂ.ನಲ್ಲಿ ನಡೆಯುವ ಗ್ರಾಮಸಭೆಯಲ್ಲಿ ಧ್ವನಿ ಎತ್ತಿದ್ದಾರೆ.

ಇದು ನರಿಕೊಂಬು ಗ್ರಾಮಪಂಚಾಯತ್ ವ್ಯಾಪ್ತಿಯ ಪಾಣೆಮಂಗಳೂರು ಮಾದವ ಸಪಲ್ಯ ಸಪಲ್ಯ ಅವರ ಮನೆಯ ಕಥೆಯಾಗಿದೆ.
ಕೃಷಿಯನ್ನೇ ನಂಬಿ ಬದುಕುವ ಮಾದವ ಸಪಲ್ಯರ ಅಡಿಕೆ ಕೃಷಿ ರಾಷ್ಟ್ರೀಯ ಹೆದ್ದಾರಿಯವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಂಪೂರ್ಣ ನಾಶವಾಗಿದೆ.
ನಡೆದಿರುವುದು ಏನು…?
ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಹರು ನಗರದ ಕಡೆಯಿಂದ ಚರಂಡಿಯ ನೀರು ಮಾದವ ಸಪಲ್ಯರ ಮನೆಯ ಮುಂಭಾಗದ ತೋಡಿನ ಮೂಲಕ ಮುಂದೆ ಹೋಗುತ್ತಿತ್ತು. ಆದರೆ ಯಾವಾಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಯಿತು ಅಲ್ಲಿಂದ ಪ್ರಾಬ್ಲಂ ಶುರುವಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುವ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯ ಪರಿಣಾಮವಾಗಿ ಚರಂಡಿಯ ನೀರು ಮುಂದೆ ಹರಿಯದೆ ಇವರ ಅಡಿಕೆ ಮತ್ತು ಭತ್ತ ತೋಟದಲ್ಲಿ ಸಂಗ್ರವಾಗಿದೆ.
ರಸ್ತೆ ಅಗಲೀರಣ ಮಾಡುವ ವೇಳೆ ಇದ್ದ ಚರಂಡಿಯನ್ನು ಮುಚ್ಚಿ ಹಾಕಿ ಮಣ್ಣು ತುಂಬಿಸಿದ ಪರಿಣಾಮವಾಗಿ ಸರಾಗವಾಗಿ ಹರಿಯುವ ನೀರು ಮುಂದೆ ಚಲಿಸಲಾಗದೆ ತಡೆಯಾಗಿದೆ.
ಇದರಿಂದ ಮಾದವ ಸಪಲ್ಯರ ಮನೆಯ ಸಮೀಪದಲ್ಲಿ ನೀರು ಸಂಗ್ರಹವಾಗಿದ್ದಲ್ಲದೆ, ಅಡಿಕೆ ಮತ್ತು ಭತ್ತದ ಕೃಷಿಗೆ ನುಗ್ಗಿ ಕೃಷಿ ಸಂಪೂರ್ಣ ಹಾನಿಯಾಗಿದೆ. ಮನೆಯ ಅಂಗಳದಲ್ಲಿರುವ ಬಾವಿಗೆ ಚರಂಡಿಯಲ್ಲಿ ನಿಂತಿರುವ ಕೊಳಚೆ ನೀರು ಇಂಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯನ್ನು ಉಂಟುಮಾಡಿದೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಮುಖೇನ ತಿಳಿಸಿದರು ಕೂಡ ಯಾವುದೇ ಪಾಸಿಟಿವ್ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.
ಜೀವನಾಧಾರ ಕೃಷಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಮಾದವ ಸಪಲ್ಯರ ಸ್ಥಳಕ್ಕೆ ಜಿಲ್ಲಾಧಿಕಾರಿ ಸಹಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬೇಟಿ ನೀಡಿ ಪರಿಹಾರ ನೀಡುವ ಕೆಲಸ ಆಗಬೇಕಾಗಿದೆ ಎಂದು ಸ್ಥಳೀಯರ ಒತ್ತಾಯ ವಾಗಿದೆ.
ಅಧಿಕಾರಿಗಳು ಬೇಟಿ ನೀಡಿ: ಗ್ರಾ.ಪಂ.ಅಧ್ಯಕ್ಷ ಸಂತೋಷ್ ಒತ್ತಾಯ
ಕೃಷಿಯನ್ನೇ ನಂಬಿರುವ ಮಾದವ ಸಪಲ್ಯರ ಸಮಸ್ಯೆಯನ್ನು ಇತ್ತೀಚಿಗೆ ನಡೆದ ಗ್ರಾಮ ಸಭೆಯಲ್ಲಿ ಗಮನಕ್ಕೆ ಬಂತು.
ಹಾಗಾಗಿ ಗ್ರಾಮಪಂಚಾಯತ್ ಪಿ.ಡಿ.ಒ.ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ.
ನರಿಕೊಂಬು ಗ್ರಾ.ಪಂ.ಗೆ ಸಮಸ್ಯೆಯ ಬಗ್ಗೆ ಅನೇಕ ಬಾರಿಮನವಿ ಮತ್ತು ದೂರು ನೀಡಿರುವ ಬಗ್ಗೆ ದಾಖಲೆ ಇದೆ. ಇದಕ್ಕೆ ಪ್ರತಿಯಾಗಿ ಗ್ರಾ.ಪಂ.ನಿಂದ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಅನೇಕ ಬಾರಿ ಪತ್ರ ಬರೆದು ಸಮಸ್ಯೆ ಗೆ ಪರಿಹಾರ ನೀಡುವ ಬಗ್ಗೆ ಕೋರಲಾಗಿದೆ.
ಆದರೆ ಸಂಬಂಧಿಸಿದ ಇಲಾಖೆ ಸರಿಯಾದ ಸ್ಪಂದನೆ ನೀಡಿಲ್ಲ. ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ.ಮತ್ತು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಗ್ರಾ.ಪಂ.ಅಧ್ಯಕ್ಷ ಸಂತೋಷ್ ಮಾದ್ಯಮದ ಮೂಲಕ ಒತ್ತಾಯ ಮಾಡಿದ್ದಾರೆ.
ಸಮಸ್ಯೆಯನ್ನು ಬಗೆಹರಿಸಿ: ಸಂತ್ರಸ್ತ ಮಾದವ ಸಪಲ್ಯ
ನಿರಂತರವಾಗಿ ಸಮಸ್ಯೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಇಲಾಖೆಗೆ ದೂರು ನೀಡುತ್ತಲೇ ಬಂದಿದ್ದೇನೆ.ಆದರೆ ಯಾರಿಂದಲೂ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ.ಹಾಗಾಗಿ ನರಿಕೊಂಬು ಗ್ರಾಮಸಭೆಯಲ್ಲಿ ಸಮಸ್ಯೆಯ ಬಗ್ಗೆ ಧ್ವನಿಯನ್ನು ಎತ್ತಿದ್ದೇನೆ.
ಕೃಷಿ ಮಾಡಿ ಜೀವನ ಸಾಗಿಸುವ ನನಗೆ ಕೊಳಕು ನೀರು ಕೃಷಿ ಭೂಮಿಯಲ್ಲಿ ನಿಂತ ಪರಿಣಾಮವಾಗಿ ಕೃಷಿ ನಾಶವಾಗಿ, ಜೀವನಕ್ಕೆ ಕಷ್ಟವಾಗಿದೆ. ಕೃಷಿ ಭೂಮಿಯಲ್ಲಿ ನೀರು ನಿಂತು ಕೃಷಿ ನಾಶವಾಗಿದ್ದಲ್ಲದೆ, ಹೆದ್ದಾರಿ ಕಾಮಗಾರಿಯವರು ಮಣ್ಣು ಹಾಕಿ ಮನೆಗೆ ಹೋಗುವ ದಾರಿಯನ್ನು ಮುಚ್ಚಿದ್ದಾರೆ, ಈ ಬಗ್ಗೆ ಯಾರಿಗೆ ದೂರು ನೀಡಿದರು ಸಮಸ್ಯೆ ಪರಿಹಾರ ಕಂಡಿಲ್ಲ ಎಂದು ಸಂತ್ರಸ್ತ ಮಾದವ ಸಪಲ್ಯ ಅವರು ತಿಳಿಸಿದ್ದಾರೆ.