ಬಂಟ್ವಾಳ : ಸಿಂಗಂ ಅಣ್ಣಾಮಲೈ ರಾಜೀನಾಮೆ, ಪೋಲೀಸ್ ಇಲಾಖೆಯಲ್ಲಿ ಸಂಚಲನ. ಪೋಲೀಸ್ ಇಲಾಖೆಯಲ್ಲಿ ಸಾಕಷ್ಟು ಹೆಸರು ಗಳಿಸಿರುವ ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿರುವ ಖಡಕ್ ಪೋಲೀಸ್ ಅಣ್ಣಾಮಲೈ ಅವರು ಮಂಗಳವಾರದಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಣ್ಣಾಮಲೈ ಅವರು ಪೋಲೀಸ್ ಹುದ್ದೆ ತೊರೆದು ರಾಜಕೀಯ ಪ್ರವೆಶ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂಬ ಗಾಳಿ ಸುದ್ದಿಯಿದೆ. ಆದರೆ ಅದನ್ನು ಅವರು ಇಂದು ನಿರಾಕರಿಸಿದ್ದಾರೆ.
ಅವಿಭಜಿತ ದ.ಕ.ಜಿಲ್ಲೆಯ ಉಡುಪಿಯಲ್ಲಿ ಇವರು ಸಂಧಿಗ್ದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಿ ಇಲ್ಲಿನ ಜನರ ಹೃದಯ ಗೆದ್ದಿದ್ದರು.

ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈ ಅವರು ಜೂನ್ ಮೊದಲ ವಾರದಲ್ಲಿ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನಲಾಗಿತ್ತು. ಆದರೆ ಮೇ 28 ರಂದು ಐಜಿ- ಡಿಜಿಪಿ ಹಿರಿಯ ಅಧಿಕಾರಿಗಳಿಗೆ ರಾಜೀನಾಮೆ ಪತ್ರ ಕಳಿಸಿದ್ದಾರೆ. 2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಅಣ್ಣಾಮಲೈ ಅವರ ರಾಜೀನಾಮೆ ಬಗ್ಗೆ ಸೋಮವಾರ ರಾತ್ರಿಯಿಂದ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತಿದಂತೆ, ಅಭಿಮಾನಿಗಳು ಅಣ್ಣಾಮಲೈ ಕಛೇರಿಯತ್ತ ಧಾವಿಸಿ, ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದಾರೆ. ಕರೂರು ಮೂಲದವರಾದ ಅಣ್ಣಾಮಲೈ ಅವರು ಪೋಲೀಸ್ ಹುದ್ದೆ ತೊರೆದ ಬಳಿಕ ಸ್ವಗ್ರಾಮಕ್ಕೆ ತೆರಳಲಿದ್ದು, ನಂತರ ಮುಂದಿನ ನಡೆ ಬಗ್ಗೆ ನಿರ್ಧರಿಸಲಿದ್ದಾರೆ ಎಂಬ ಸುದ್ದಿಯಿದೆ. ತಮಿಳುನಾಡಿನಿಂದ ರಾಜಕೀಯ ರಂಗಕ್ಕೆ ಎಂಟ್ರಿ ಕೊಡಲು ಸಿಧ್ದತೆ ನಡೆಸಿದ್ದಾರೆ. ಅಣ್ಣಾಮಲೈ ಅವರು ಡಿಎಂಕೆ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿಯೂ ಹಬ್ಬಿದೆ ಆದರೆ, ಯಾವುದೂ ಖಚಿತವಾಗಿಲ್ಲ. ಅಣ್ಣಾಮಲೈ ಅವರು ಈ ಬಗ್ಗೆ ಪ್ರತಿಕ್ರಯಿಸಿಲ್ಲ.