ಉಜಿರೆ: ಕರ್ನಾಟಕ ಜೈನ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಸ್ವ-ಸಹಾಯ ಸಂಘಗಳ ಆಶ್ರಯದಲ್ಲಿ ಮಂಗಳವಾರ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು.
ಟ್ರಸ್ಟ್ ಸಂಚಾಲಕ ನೇಮಿರಾಜ ಆರಿಗ ನೇತೃತ್ವದಲ್ಲಿ ಕ್ರಮವಾಗಿ ಜಲಾಭಿಷೇಕ, ನಾರಿಕೇಳ, ಇಕ್ಷುರಸ (ಕಬ್ಬಿನ ಹಾಲು), ಹಾಲು, ಕಲ್ಕಚೂರ್ಣ, ಅರಿಶಿನ, ಕಷಾಯ, ಚತುಷ್ಕೋನ ಕಲಶ, ಕೇಸರಿ, ಶ್ರೀಗಂಧ, ಚಂದನ ಮತ್ತು ಅಷ್ಟ ಗಂಧದ ಅಭಿಷೇಕ ನಡೆಯಿತು.
ಶ್ರವಣಬೆಳಗೊಳದ ಸರ್ವೇಶ್ ಜೈನ್ ಮತ್ತು ಬಳಗದವರ ಸುಶ್ರಾವ್ಯ ಜಿನ ಭಕ್ತಿಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
ಸೌಮ್ಯ ಸರ್ವೇಶ್ ಜೈನ್, ಅಶ್ವಿನಿ, ಸಚಿನ್ ಮತ್ತು ಬಾಬಣ್ಣ ಮತ್ತೂರು ಹಿಮ್ಮೇಳದಲ್ಲಿ ಸಹಕರಿಸಿದರು. ಮೂಡಬಿದ್ರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡಿದರು.
ರೆಂಜಾಳ ಗೋಪಾಲಕೃಷ್ಣ ಶೆಣೈ ಬಾಹುಬಲಿ ಮೂರ್ತಿಯನ್ನು ಸುಂದರವಾಗಿ ಕೆತ್ತನೆ ಮಾಡಿ ರಾಷ್ಟ್ರಮಟ್ಟದ ಶಿಲ್ಪಿಯಾಗಿ ಕೀರ್ತಿ ಪಡೆದಿರುತ್ತಾರೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಶಿಲ್ಪಿಯ ಮೊಮ್ಮಗ ಕಾರ್ಕಳದ ರಾಧಾಮಾಧವ ಶೆಣೈ ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.
ಮೂಡಬಿದ್ರೆಯ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಉಪಸ್ಥಿತರಿದ್ದರು. ಮಸ್ತಕಾಭಿಷೇಕ ಸಂದರ್ಭದಲ್ಲಿ ಸ್ವಯಂ ಸೇವಕರ ಶಿಸ್ತುಬದ್ಧ ಸೇವೆಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು. ಮಹಾವೀರ ಜೈನ್ ಮೂಡುಕೋಡಿ ಗುತ್ತು ಕಾರ್ಯಕ್ರಮ ನಿರ್ವಹಿಸಿದರು.

