ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಡಿಎಚ್‌ಒಗಳ ಜೊತೆಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಆರ್.ಅಶೋಕ್, ಡಾ. ಕೆ.ಸುಧಾಕರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಸಭೆ ನಡೆಸಿದ್ದಾರೆ.


ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು ಹಲವು ನಿರ್ಬಂಧಗಳನ್ನು ಹೇರುವ ಅಗತ್ಯವಿದೆ ಎಂದಿರುವ ಕಂದಾಯ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಎಲ್ಲ ಕಡೆಯೂ ಜಾತ್ರೆಗಳನ್ನು ನಿಷೇಧಿಸಲಾಗಿದೆ. ಎಲ್ಲಿಯೂ ಜಾತ್ರೆ ನಡೆಸಬಾರದು. ಜಾತ್ರೆ ನಡೆದರೆ ಜಿಲ್ಲಾಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡಿಸಿಗಳ ಅನುದಾನವನ್ನು ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಬಳಕೆ ಮಾಡಿ. ಯಾವುದೇ ಸಮಸ್ಯೆಗಳು ಎದುರಾದಲ್ಲಿಯೂ ಆ ಬಗ್ಗೆ ಡಿಸಿಗಳೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಸಿದ್ಧವಿರುವುದಾಗಿಯೂ ಸಚಿವ ಹೇಳಿದ್ದಾರೆ.
“ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಜಾತ್ರೆ ನಡೆಯುವಂತಿಲ್ಲ. ಮದುವೆ ಸಮಾರಂಭ ನಡೆಸಲು ಕಡ್ಡಾಯವಾಗಿ ಪಾಸ್ ತೆಗೆದುಕೊಳ್ಳಬೇಕು. ಒಳಾಂಗಣದಲ್ಲಿ 100 ಹಾಗೂ ಹೊರಾಂಗಣದಲ್ಲಿ 200ಕ್ಕಿಂತ ಹೆಚ್ಚು ಜನ ಸೇರಿದರೆ ಕಲ್ಯಾಣ ಮಂಟಪ ಮುಚ್ಚಿಸುತ್ತೇವೆ” ಎಂದು ಸಚಿವ ಅಶೋಕ್ ಸಭೆಯಲ್ಲಿ ಎಚ್ಚರಿಸಿದ್ದಾರೆ.
ಜೊತೆಗೆ ಟೆಸ್ಟಿಂಗ್, ಟ್ರೇಸಿಂಗ್ ಸೇರಿದಂತೆ ಇನ್ನಿತರ ನಿಯಂತ್ರಣಕ್ಕೆ ಪೂರಕವೆನಿಸಿದ ಕ್ರಮಗಳ ಅನುಸರಣೆ ಸರಿಯಾಗಿ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಸರ್ಕಾರ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆಯೂ ಸಭೆಯಲ್ಲಿ ಹೇಳಲಾಗಿದೆ. ರಾಜ್ಯದಲ್ಲಿ ಜಾತ್ರೆ ಸೇರಿದಂತೆ ಇನ್ನಿತರ ಯಾವುದೇ ಹೆಚ್ಚು ಜನಸಂದಣಿಯಾಗುವ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಈ ಸಂಬಂಧ ಜನರಿಗೆ ಮನವರಿಕೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದಿನಿಂದ ಬುಕ್ ಆಗುವ ಸಮಾರಂಭಗಳಿಗೆ ಈ ನಿಯಮ ಅನ್ವಯವಾಗಲಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಎಲ್ಲಿಯೂ ಆಮ್ಲಜನಕದ ಸಮಸ್ಯೆ ಆಗಬಾರದು. ಕಳೆದ ಬಾರಿಗಿಂತ ಈ ಬಾರಿ ಪ್ರಕರಣಗಳು ಹೆಚ್ಚಾಗಬಹುದು. ಹೀಗಾಗಿ ಯಾವುದೇ ಸಮಸ್ಯೆ ಆಗಬಾರದು. ಸಿಬ್ಬಂದಿಗೆ ಸಂಬಳದಲ್ಲಿಯೂ ತೊಂದರೆ ಎದುರಾಗಬಾರದು ಎಂದಿದ್ದಾರೆ. ಶವ ಸಂಸ್ಕಾರ ಮಾಡುವಲ್ಲಿ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಕೊರೋನಾ ಸಂಬಂಧ ಡಾಟಾ ಎಂಟ್ರಿ ನಡೆಸಲು ಸೂಕ್ತ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಸೂಚಿಸಿದ್ದಾರೆ. ಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ವೇತನ ನೀಡುವಂತೆಯೂ ಸಭೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಕೊರೋನಾ ನಿಯಂತ್ರಣ ಸಂಬಂಧ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ಕ್ರಮ ವಹಿಸುವಂತೆಯೂ ಅಧಿಕಾರಿಗಳಿಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ರೆಮಿಡಿಸ್ವಿರ್ ಔಷಧಕ್ಕೆ ಕೊರತೆ ಇಲ್ಲ. ಈ ಸಂಬಂಧ ಯಾವುದೇ ಆತಂಕ ಬೇಡ ಎಂದು ತಿಳಿಸಿದ್ದಾರೆ.












