ಪ್ರಚಾರ ಬಯಸದ ಕಾಯಕವೇ ಕೈಲಾಸ ಅಂತ ಕೊರೊನಾ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮನೆ, ಕುಟುಂಬ ಆರೋಗ್ಯ ಇದ್ಯಾವುದನ್ನು ಲೆಕ್ಕಿಸದೆ ದಿನದ 24 ಗಂಟೆಯೂ ಬಂಟ್ವಾಳ ತಾಲೂಕಿನ ಮೂಲೆ ಮೂಲೆಗಳಲ್ಲಿ ಸಂಚರಿಸಿ ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುವ ಏಕೈಕ ಲೇಡಿ ಆಫೀಸರ್ ಅವರೇ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಅರ್.

ಬಂಟ್ವಾಳ: ಕರೆ ಮಾಡಿ ಮಾಹಿತಿ ನೀಡಿದ 8 ಗಂಟೆಗಳಲ್ಲಿ ಕರ್ನಾಟಕ ಕೇರಳ ಗಡಿ ಭಾಗದ ಆದಿವಾಸಿ ಕುಟುಂಬಗಳನ್ನ ಭೇಟಿ ಮಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಅವರು ಸಮಸ್ಯೆಗೆ ಸ್ಪಂದಿಸಿದ್ದಾರೆ. ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಮಾತ್ರವಲ್ಲದೆ ಸಾಲೆತ್ತೂರು ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಅಸಹಾಯಕರಿಗೂ ನೆರವು ನೀಡಿದ್ದಾರೆ. ಇಂತಹ ದಕ್ಷ ಅಧಿಕಾರಿಗೆ ಊರಿನ ಜನತೆ ತಲೆ ಭಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಆದಿವಾಸಿ ಕುಟುಂಬಗಳಿಗೆ ಸಿಕ್ಕಿತು ರೇಷನ್
ಲಾಕ್ ಸಮಸ್ಯೆ ಯಿಂದ ಸಾಲೆತ್ತೂರು ಗ್ರಾಮದ ಬಟ್ರಕೋಡಿ ಎಂಬಲ್ಲಿನ ಸುಮಾರು ಮೂರು ಕುಟುಂಬಗಳ 12 ಕ್ಕೂ ಅಧಿಕ ಜನರಿಗೆ ಸರಕಾರದ ರೇಷನ್ ಸಿಗದೆ ಊಟಕ್ಕಾಗಿ ನೆರೆಹೊರೆಯವರ ಮನೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ದಿನದೂಡುತ್ತಿದ್ದರು.
ಕೇರಳ ಮತ್ತು ಸಾಲೆತ್ತೂರು ಗಡಿಭಾಗವನ್ನು ಪೋಲೀಸರು ಬಂದ್ ಮಾಡಿದ ಕಾರಣ ಇಲ್ಲಿನ ನಿವಾಸಿಗಳಿಗೆ ಸುಮಾರು 2 ಕಿ.ಮೀ.ದೂರ ವಾಹನ ಸಂಚಾರಕ್ಕೆ ಅವಕಾಶ ಇಲ್ಲದೆ ನಡೆದುಕೊಂಡು ಹೋಗಬೇಕಾಗಿತ್ತು. ಹಾಗಾಗಿ ಅವರು ರೇಷನ್ ಪಡೆಯಲು ಅಸಾಧ್ಯವಾಗಿತ್ತು.
ಈ ಬಗ್ಗೆ ಸ್ಥಳೀಯ ರು ನೀಡಿದ ದೂರಿಗೆ ಸ್ಪಂದಿಸಿದ ತಹಶೀಲ್ದಾರ್ ಅವರು ಸ್ಥಳಕ್ಕೆ ಬೇಟಿ ನೀಡಿ ಅವರಿಗೆ ರೇಷನ್ ಮನೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ನಿರಾಶ್ರಿತ ಕುಟುಂಬಕ್ಕೆ ಆಶ್ರಯ
ಸಾಲೆತ್ತೂರು ಗ್ರಾಮದಲ್ಲಿ ಕಿಂಡಿ ಅಣೆಕಟ್ಟಿಗೆ ತಡೆಗೋಡೆ ನಿರ್ಮಿಸಲು ಗದಗ ಜಿಲ್ಲೆಯಿಂದ ಬಂದಿರುವ ಕೂಲಿಕಾರ್ಮಿಕರು ಕೊರೋನಾ ಲಾಕ್ ಡೌನ್ ನಿಂದಾಗಿ ನಿರಾಶ್ರಿತರಾದ ಎಂಟು ಕುಟುಂಬಗಳ 19 ಜನರಿಗೆ ಸಾಲೆತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಶ್ರಯ ಕಲ್ಪಿಸಿದ್ದು ಅವರಿಗೆ ದೈನಂದಿನ ಆಹಾರ ವಸ್ತುಗಳಿಗೆ ನೆರವಾದರು.
ತಹಶೀಲ್ದಾರ ರಶ್ಮಿ ಎಸ್. ಆರ್. ರವರು ಸ್ಥಳಕ್ಕೆ ಭೇಟಿ ನೀಡಿ, ನಿರಾಶ್ರಿತರ ಅಹವಾಲು ಆಲಿಸಿ, ಅಗತ್ಯ ವ್ಯವಸ್ಥೆ ಬಗ್ಗೆ ಕ್ರಮಕೈಗೊಂಡಿರುತ್ತಾರೆ.
ರೇಷನ್ ಅಂಗಡಿಯಲ್ಲಿ ಗೋಲ್ ಗೆ ಬ್ರೇಕ್
ಇಲ್ಲಿನ ಎರಡು ಗ್ರಾಮಗಳ ಜನರಿಗೆ ನೀಡುವ ರೇಷನ್ ಅಂಗಡಿ ಯಲ್ಲಿ ಪ್ರತಿ ಕುಟುಂಬದ ಒಂದು ಕಿ.ಲೋ ಅಕ್ಕಿಯನ್ನು ನೀಡದೆ ಗೋಲ್ ಮಾಲ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅರೀತಿಯಲ್ಲಿ ಉಳಿಸಿದ ಅಕ್ಕಿಯನ್ನು ದುಪ್ಪಟ್ಟು ಕ್ರಯಕ್ಕೆ ಮಾರುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಬೇಟಿ ನೀಡಿ ಅದಕ್ಕೂ ಕಡಿವಾಣ ಹಾಕಿದ್ದಾರೆ.

ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಮೂರು ಪ್ರಕರಣಗಳಿಗೂ ಸ್ಪಂದಿಸಿದ ಮಹಿಳಾ ಅಧಿಕಾರಿಗೆ ಊರಿನ ಜನರಿಂದ ಅಭಿನಂದನೆ ಗಳ ಮಹಾಪೂರವೇ ಹರಿದು ಬಂದಿದೆ.
ಈ ಸಂದರ್ಭ ವಿಟ್ಲ ಕಂದಾಯ ನಿರೀಕ್ಷಕರಾದ ದಿವಾಕರ ಮುಗುಳಿಯ, ಸಾಲೆತ್ತೂರು ಗ್ರಾ.ಪಂ.ಕಾರ್ಯದರ್ಶಿ, ಸಾಲೆತ್ತೂರು ಗ್ರಾಮ ಲೆಕ್ಕಾಧಿಕಾರಿ ಅನಿಲ್,
ಗ್ರಾಮ ಸಹಾಯಕ ಮಹಾಬಲ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

