ಬಂಟ್ವಾಳ: ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ( 55) ಅವರು ಪಾಣೆಮಂಗಳೂರು ನೇತ್ರಾವತಿ ನದಿ ಕಿನಾರೆಯಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಮೃತರ ಶವವನ್ನು ಟ್ಯಾಂಕ್ ನಿಂದ ಮೇಲಕ್ಕೆತ್ತಲಾಗಿದೆ.
ಬೆಳಿಗ್ಗೆ ಸುಮಾರು 11 ಗಂಟೆಗೆ ಪುತ್ತೂರಿನಿಂದ ಬೈಕಿನಲ್ಲಿ ಬಂದ ರಮೇಶ್ ರೈ ಅವರು ಪಾಣೆಮಂಗಳೂರು ಹಳೆಯ ಸೇತುವೆ ಕೆಳಭಾಗದಲ್ಲಿ ಬೈಕ್ ನಿಲ್ಲಿಸಿ, ಶರ್ಟ್ ಕಳಚಿ, ಪರ್ಸ್,ಚಪ್ಪಲಿ ಹಾಗೂ ಮೊಬೈಲ್ ಬಿಟ್ಟು ಕಾಣೆಯಾಗಿದ್ದರು.
ಅನಾಥವಾಗಿದ್ದ ಬೈಕ್ ಹಾಗೂ ಮೊಬೈಲ್ ನ್ನು ಕಂಡು ಸ್ಥಳೀಯರು ಬಂಟ್ವಾಳ ನಗರ ಪೋಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಆಗಮಿಸಿದ ಪೋಲೀಸರು ಮೊಬೈಲ್ ಫೋನ್ ಆಧಾರದ ಮೇಲೆ ಪೋನ್ ಮಾಡಿದಾಗ ನೆಲ್ಲಿಕಟ್ಟೆ ರಮೇಶ್ ರೈ ಅವರ ಬೈಕ್ ಎಂಬುದು ಖಚಿತವಾದ ಬಳಿಕ ಅವರ ಕುಟುಂಬ ಮೂಲಗಳಿಗೆ ಮಾಹಿತಿ ನೀಡಲಾಗಿದೆ.
ಮನೆಯವರು ಸ್ಥಳಕ್ಕೆ ಬಂದ ಬಳಿಕ ಪೋಲೀಸರ ಜೊತೆ ಸ್ಥಳೀಯ ಈಜುಗಾರರ ತಂಡದೊಂದಿಗೆ ನದಿ ಹಾಗೂ ಸ್ಥಳೀಯ ಭಾಗದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ. ಬಂಟ್ವಾಳ ಆಗ್ನಿಶಾಮಕ ದಳದವರು ಕೂಡ ಆಗಮಿಸಿದ್ದರು.
ಇದೀಗ ಸುಮಾರು 4.30 ಗಂಟೆ ವೇಳೆಗೆ ಬೈಕ್ ನಿಲ್ಲಿಸಿದ ಸಮೀಪದಲ್ಲಿ ಇರುವ ಪುರಸಭೆ ಇಲಾಖೆಗೆ ಸೇರಿದ ಕುಡಿಯುವ ನೀರಿನ ಟ್ಯಾಂಕ್ ನೊಳಗೆ ಮೃತದೇಹ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ಅಂಗಿ ತೆಗೆದು ಮೊಬೈಲ್ ಸಹಿತ ಇತರ ಸೊತ್ತುಗಳನ್ನು ಅಲ್ಲಿ ಬಿಟ್ಟು ಟ್ಯಾಂಕ್ ಒಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪೋಲೀಸರಿಗೆ ಶಂಕಿಸಿದ್ದಾರೆ.
ರಮೇಶ್ ರೈ ಆತ್ಮಹತ್ಯೆ ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ.ಇವರು
ಸುಮಾರು ವರ್ಷಗಳಿಂದ ಸುಳ್ಯ ಪುತ್ತೂರು ಭಾಗದಲ್ಲಿ ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದರು.ಬಿಜೆಪಿ ಸಕ್ರೀಯ ಕಾರ್ಯಕರ್ತನಾಗಿದ್ದು, ಒಂದು ಬಾರಿ ಪುರಸಭೆ ಸದಸ್ಯನಾಗಿ ಮತ್ತು ಇದೀಗ ಎರಡನೇ ಬಾರಿ ನಗರ ಸಭಾ ಸದಸ್ಯನಾಗಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ ಸದಸ್ಯ ಶಕ್ತಿಸಿನ್ಹ ಅವರು ಮೃತಪಟ್ಟ ಕಾರಣಕ್ಕಾಗಿ ಅವರ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ
ಇವರು ಸ್ಪರ್ಧಿಸಿ ಗೆದ್ದಿದ್ದರು.
ಪಕ್ಷದ ನಿಷ್ಠಾವಂತ ಮತ್ತು ಅತ್ಯುತ್ತಮ ಸಾಮಾಜಿಕ ಕಾರ್ಯಕರ್ತನಾಗಿದ್ದು ಜನಪ್ರಿಯ ಪಡೆದಿದ್ದರು.
ಮೃತರು ಪತ್ನಿ ಹಾಗೂ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳ ಸಹಿತ ಅನೇಕ ಬಂಧುಬಳಗವನ್ನು ಅಗಲಿದ್ದಾರೆ.
ಮಗಳು ವಿದ್ಯಾರ್ಥಿನಿಯಾಗಿದ್ದು ಮಗ ಟೌನ್ ಬ್ಯಾಂಕ್ ಉದ್ಯೋಗಿಯಾಗಿದ್ದಾನೆ.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು,ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು,ನಗರ ಅಧ್ಯಕ್ಷೆ ಲೀಲಾವತಿ ,ಉಪಾಧ್ಯಕ್ಷ ಬಾಲಚಂದ್ರ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಆರ್.ಸಿ.ನಾರಾಯಣ, ದಯಾನಂದ, ಚೆನ್ನಪ್ಪ ಆರ್ ಕೋಟ್ಯಾನ್ ಅವರು ಸಂತಾಪ ಸೂಚಿಸಿದ್ದಾರೆ.
ವಿಜೆ ಅಬುಸಾಲಿ,ಮಹಮ್ಮದ್ ಗೂಡಿನಬಳಿ,ಅಶ್ರಫ್ ಅಕ್ಕರಂಗಡಿ ,ಲತೀಫ್ ನಂದಾವರ, ಅಸ್ಪಕ್ ಅಕ್ಕರಂಗಡಿ, ಇರ್ಫಾನ್ ಅಕ್ಕರಂಗಡಿ ಅವರು ಟ್ಯಾಂಕ್ ನೊಳಗೆ ಇಳಿದು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿಸಿದ್ದಾರೆ.

