.ಫಾರೂಕ್ ಬಂಟ್ವಾಳ
ಕಲಿಸಿದ ಗುರುವಿಗೆ ಭಾವಪೂರ್ಣ ವಿದಾಯ ಹೇಳುವ ಮುನ್ನ…
ಬದುಕು ಕಲಿಸುವ ಪಾಠ ಯಾವ ವಿಶ್ವವಿದ್ಯಾಲಯವೂ ಕಲಿಸದು ಎನ್ನುವ ಮಾತೊಂದಿದೆ. ಬದುಕು ಕೂಡ ಕೆಲವೊಂದನ್ನು ಬಚ್ಚಿಟ್ಟುಕೊಂಡು ನಮ್ಮನ್ನು ಎಡವಿಸುತ್ತದೆ. ಆದರೆ ವಿದ್ಯೆ ಕಲಿಸುವ ಗುರು ಎಂದೋ ಕೆಡಕು ಬಯಸಲಾರ ಎನ್ನುವುದು ಬದುಕು ಕಲಿಸಿದ ಪಾಠ.
ಈ ಮಾತು ಇಂದು ನಮ್ಮನ್ನೆಲ್ಲಾ ಬೀಳ್ಕೊಡಲಿರುವ ನಮ್ಮೆಲ್ಲರ ಗೌರವದ, ಪ್ರೀತಿಯ ಶ್ರೀಯುತ ರಾಮಚಂದ್ರ ರಾಯರಿಗೆ ಸಲ್ಲುತ್ತದೆ. ಓರ್ವ ಶಿಕ್ಷಕ, ಕೊನೆಯ ತನಕವೂ ಕೇವಲ ಒಬ್ಬ ಶಿಕ್ಷಕರಾಗಿ ಉಳಿಯಬಲ್ಲ; ಹಲವಾರು ಉದಾಹರಣೆಯ ನಡುವೆಯೂ ರಾಮಚಂದ್ರ ಮಾಸ್ತರರ ವ್ಯಕ್ತಿತ್ವ ವಿಭಿನ್ನವಾಗಿ ಕಾಣುವುದು.
ರಂಗಕರ್ಮಿಯಾಗಿ, ನಾಟಕ ನಿರ್ದೇಶಕರಾಗಿ, ಸಂಗೀತ ವಿದ್ವಾನ್ ಆಗಿ, ಆಟಗಾರರಾಗಿ, ಬರಹಗಾರರಾಗಿ, ಉದ್ಘೋಷಕರಾಗಿ, ನಿರೂಪಕರಾಗಿ, ಭಾಷಣಕಾರರಾಗಿ, ಕವನ ರಚನೆಕಾರರಾಗಿ, ತರಬೇತಿದಾರರಾಗಿ, ಸಂಘಟಕರಾಗಿ…. ವೃತ್ತಿ ಬದುಕಿನಿಂದ ಈಚೆ ಬಂದು ವ್ಯಕ್ತಿತ್ವವನ್ನು ವಿಸ್ತಾರಗೊಳಿಸಿದವರು. ಅದರಲ್ಲೂ ಮುಖ್ಯವಾದುದು ಅವರ ಕಂಚಿನಕಂಠ. ಹೀಗೆ ಬಹುಮುಖ ಸಾಧನೆಗಳ ನಾನಾ ಮಜಲುಗಳೂ, ಒಂದೊಂದು ವಿಶೇಷಣ ಹೊಂದಿದೆ.
ತಮ್ಮ ಪಾಲಿನ ಕರ್ತವ್ಯ ಇರಲಿ, ತಮ್ಮ ಮೇಲಿನ ಜವಾಬ್ದಾರಿ ಇರಲಿ. ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಎಲ್ಲರೂ ಮೆಚ್ಚಿ ಬೆರಗುಗೊಳಿಸುವುದೇ ರಾವ್ ವಿಶೇಷ. ವೃತ್ತಿ ಜೀವನದಲ್ಲೂ ಅಷ್ಟೇ ಸಂಹಿತೆ, ನೀತಿ-ಕ್ರಮ ಅಳವಡಿಸಿಕೊಂಡವರು. ಶಾಲಾ ಪಠ್ಯಕ್ಕೂ ರಚನಾತ್ಮಕ ಚೌಕಟ್ಟು ನೀಡಿ, ಆಧುನಿಕತೆ ಸ್ಪರ್ಶ ನೀಡಿದವರು.
ಅನುದಾನಿತ ಶಾಲಾ ಶಿಕ್ಷಕರ ಸಂಘವನ್ನು ಸಂಘಟಿಸಿದ ಅನುದಾನಿತ ವಿದ್ಯಾಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಸರಕಾರದ ಮಟ್ಟದಲ್ಲಿ ಗಮನ ಸೆಳೆಯಲು ಸಾಕಷ್ಟು ಪರಿಶ್ರಮ ಪಟ್ಟವರು. ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಮತ್ತಿತರ ಸಂಘಟನೆಗಳನ್ನು ಮುನ್ನುಡೆಸಿ ಸಾಹಿತ್ಯ ಸೇವೆ, ಜೇಸಿಐ, ರೋಟರಿ, ಲಯನ್ ಕ್ಲಬ್ ಮೊದಲಾದ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸಿ ಬೇಷ್ ಅನ್ನಿಸಿಕೊಂಡವರು.
ಈ ಎಲ್ಲವನ್ನೂ ಹಿನ್ನೆಲೆಯಾಗಿಸಿಕೊಂಡರೆ ಇಡೀ ಶಿಕ್ಷಕರ ಸಮೂಹ ಅವರಿಗೆ ಋಣಿಯಾಗಿದೆ. ಶ್ರೀಯುತರ ವೃತ್ತಿ ಜೀವನದ ಸಾಧನೆ, ಅಪರಿಮಿತ ವ್ಯಾಪ್ತಿ ‘ರಾಷ್ಟ್ರ ಪ್ರಶಸ್ತಿ’ ಪಡೆಯುವ ಎಲ್ಲಾ ಮಾನದಂಡ, ಅರ್ಹತೆ ಹೊಂದಿದರೂ, ಪ್ರಶಸ್ತಿ, ಪುರಸ್ಕಾರಗಳನ್ನು ಅವರು ಹಿಂಬಾಲಿಸಿಕೊಂಡು ಹೋದವರಲ್ಲ. ಈ ವಿಷಾದದ ಮಧ್ಯೆಯೂ, ವೃತ್ತಿ ಜೀವನವನ್ನು ಕೊನೆಗೊಳಿಸಿದ ರಾವ್ ಅವರನ್ನು ಬೀಳ್ಕೊಡುವ ಮುನ್ನ ಒಂದು ಬಲಿಷ್ಠವಾದ ಅಪರಾಧ ಪ್ರಜ್ಞೆ ಕಾಡದೇ ಇರದು.
ಫಾರೂಕ್ ಬಂಟ್ವಾಳ
