ಬಂಟ್ವಾಳ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಶನಿವಾರ ಸಂಜೆ ಭೇಟಿ ನೀಡಿದರು.ಕಾರ್ಯಕ್ರಮ ನಿಮಿತ್ತ ಮಂಗಳೂರಿಗಾಗಮಿಸಿದ್ದ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು,ವಾಪಾಸ್ ದೆಹಲಿಗೆ ತೆರಳುವ ಸಂದರ್ಭ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವಳದ ವೈಭವವನ್ನು ವೀಕ್ಷೆಸಿದರು.




ಮಂಗಳೂರಿನಿಂದ ರಸ್ತೆ ಮೂಲಕ ಫರಂಗೀಪೇಟೆ ,ಕಡೇಗೋಳಿ,ಕಲ್ಪನೆಯಾಗಿ ಪೊಳಲಿ ದೇವಸ್ಥಾನಕ್ಕೆಅಗಮಿಸಿದರು.ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸಚಿವರೊಂದಿಗೆ ಇದ್ದರು. ದೇವಳದ ಹೊರಾಂಗಣದಲ್ಲಿ ಸಚಿವ ರಾಜನಾಥ ಸಿಂಗ್ ಅವರನ್ನು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ,ಶಾಸಕ ಯು.ರಾಜೇಶ್ ನಾಯ್ಕ್,ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಏರ್ಯ ಲಕ್ಷೀನಾರಾಯಣ ಆಳ್ವ,ಶಾಸಕ ಉಮಾನಾಥ ಕೋಟ್ಯಾನ್, ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ,ಮೊಕ್ತೇಸರರಾದ ತಾರನಾಥ ಆಳ್ವ ಉಳಿಪಾಡಿಗುತ್ತು,ಚೇರಸೂರ್ಯನಾರಾಯಣ ರಾವ್ ರವರು ಸ್ವಾಗತಿಸಿದರು. ಬಳಿಕ ಸಚಿವರು ಉಗ್ರಾಣ, ದೇವಳದ ವೈಭವ, ಮರದ ಕೆತ್ತನೆಯನ್ನು ವೀಕ್ಷಸಿ ಕಣ್ತುಂಬಿಕೊಂಡರು. ಶ್ರೀದೇವರ ದರ್ಶನ ಪಡೆದ ಸಚಿವರಿಗೆ ಅರ್ಚಕರು ಪ್ರಾರ್ಥಿಸಿ ಪ್ರಸಾದವಿತ್ತರು. ಶಾಸಕ ಯು.ರಾಜೇಶ್ ನಾಯ್ಕ್ ಅವರು ದೇವಳದ ಇತಿಹಾಸದ ಪುಸ್ತಕ,ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಚಿವರಿಗೆ ದೇವಳದ ಐತಿಹ್ಯವನ್ನು ವಿವರಿಸಲಾಯಿತು.












