ಮಂಗಳೂರು : ವಕ್ಪ್ ಸಂಸ್ಥೆಯ ಧರ್ಮಗುರುಗಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ನಡೆಸುವುದಾಗಿ ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರ ಉದ್ದೇಶ ಏನು ? ಕಾರ್ಯಾಗಾರ ನಡೆಸುವವರು ಯಾರು ? ಎನ್ನುವ ಆತಂಕ ಸಹಜವಾಗಿಯೇ ಜನರಲ್ಲಿ ಮೂಡಿದೆ. ಬಜೆಟ್ ಭಾಷಣದಲ್ಲಿ ಸಾಮಾನ್ಯವಾಗಿ ಅರ್ಥಿಕ ಸಂಪನ್ಮೂಲ ಕ್ರೋಡೀಕರಣ ಮತ್ತು ಅಭಿವೃದ್ದಿ ಯೋಜನೆಗಳಿಗೆ ಹಣ ಹಂಚಿಕೆ ಬಗ್ಗೆ ರಾಜ್ಯದ ಜನತೆಗೆ ಸಮಗ್ರ ಮಾಹಿತಿ ನೀಡಲಾಗುತ್ತದೆ. ಆದರೆ ಸಿದ್ದರಾಮಯ್ಯ ಅವರು ರಾಜಕೀಯ ದ್ವೇಷದ ಭಾಷಣ ಮಾಡುವ ಕೆಟ್ಟ ಸಂಪ್ರದಾಯವನ್ನು ಈ ಬಜೆಟ್‌ನಲ್ಲೂ ಮುಂದುವರಿಸಿದ್ದಾರೆ. ಕೇಂದ್ರ ಸರ್ಕಾರವನ್ನು ದೂಷಿಸಲು ಸೀಮಿತವಾದ ಈ ಬಜೆಟ್ ಯುಪಿಎ ಸರ್ಕಾರವನ್ನು ಹೊಗಳುವುದರ ಜತೆಗೆ ಭಾರತ್ ಜೋಡೋ ಯಾತ್ರೆಯನ್ನೂ ಉಲ್ಲೇಖಿಸಿರುವುದು ನಾಚಿಕೆಗೇಡಿನ ವಿಚಾರ. ಚುನಾವಣೆ ಸಂದರ್ಭ ಕರಾವಳಿಗೆ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸಿ 2,500 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಬಜೆಟ್‌ನಲ್ಲಿ ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿೃಸಿದೆ.

-ನಳಿನ್‌ಕುಮಾರ್ ಕಟೀಲ್, ಸಂಸದರು, ದ.ಕ.