ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ನೇತೃತ್ವದಲ್ಲಿ ಮಿತ್ರ ಮಂಡಳಿಯ ಸ್ಥಾಪಕಾಧ್ಯಕ್ಷ ದಿ| ಪದ್ಮ ಮೂಲ್ಯ ಅನಿಲಡೆ ಅವರ ಸ್ಮರಣಾರ್ಥ ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಗೆ ತಂಡಗಳ ಆಯ್ಕೆ ನಡೆದಿದೆ.
ಮಿತ್ರ ಮಂಡಳಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡಗಳಿಗೆ ದಿನಾಂಕ ಆಯ್ಕೆ ಪ್ರಕ್ರಿಯೆ ನಡೆಯಿತು. ಮಿತ್ರ ಮಂಡಳಿಯ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮೋಹನ್ ಸಾಲ್ಯಾನ್, ಪದಾಧಿಕಾರಿಗಳಾದ ಪಿ. ಕಾಂತಪ್ಪ ಟೈಲರ್, ಜಯರಾಜ್ ಅತ್ತಾಜೆ, ಮಂಜಪ್ಪ ಮೂಲ್ಯ, ರಾಜೇಶ್ ಪಿ., ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸರ್ಧೆಗೆ ಆಯ್ಕೆಗಾಗಿ ಒಟ್ಟು 16 ತಂಡಗಳ ಕೃತಿಗಳು ನೊಂದಾಯಿಸಿದ್ದು, ಅಂತಿಮವಾಗಿ 7 ತಂಡಗಳನ್ನು ಆಯ್ಕೆ ಸಮಿತಿ ಆಯ್ಕೆಗೊಳಿಸಿದೆ. ಆಯ್ಕೆಯಾದ ತಂಡಗಳ ಉಪಸ್ಥಿತಿಯಲ್ಲಿ ಚೀಟಿ ಎತ್ತುವ ಮೂಲಕ ಆಯಾ ತಂಡಗಳ ಸರ್ಧಾ ದಿನಾಂಕ ನಿಗದಿಗೊಳಿಸಲಾಯಿತು.
ರಾಜೇಂದ್ರ ಕೆ.ವಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಮೂರ್ಜೆ ವಂದಿಸಿದರು.
ಫೆ. 23ರಂದು ನಾಟಕ ಸರ್ಧೆ ಉದ್ಘಾಟನೆಗೊಳ್ಳಲಿದ್ದು, ಮುದರಂಗಡಿ ಶ್ರೀ ಗುರು ಕಲಾ ತಂಡದ ನಾಟಕ ವಾಸುದೇವೇರ್ನ ಕುಟುಂಬ, ಫೆ. 24 ರಂದು ಧರಿತ್ರಿ ಕಲಾವಿದರು ಕುಡ್ಲ-ಇಂಚಾಂಡ ಎಂಚ, ಫೆ. 25ರಂದು ಕುಸಾಲ್ದ ಕಲಾವಿದೆರ್ ಸುಂಕದಕಟ್ಟೆ ಬಜ್ಪೆ-ಬರೇದಾತ್ಂಡ್ ಒಚ್ಚೇರಾಪುಜಿ, ಫೆ. 26ರಂದು ಪ್ರಸನ್ನ ಕಲಾವಿದೆರ್ ಬಲೂರು ಉಡುಪಿ-ಮೇ 22, ಫೆ. 27ರಂದು ತುಳುವೆರೆ ಕಡಲ್ ಕಲಾವಿದೆರ್ ಜೋಡುಕಲ್ಲು-ಶ್ರೀಮತಿ, ಫೆ. 28ರಂದು ನಮ್ಮ ಕಲಾವಿದರು ನೆಲ್ಯಾಡಿ-ಮಗೆ ದುಬಡ್, ಮಾ. 1ರಂದು ಅಭಿನಯ ಕಲಾವಿದೆರ್ ಉಡುಪಿ-ಬರಂದೆ ಕುಲ್ಲಯೆ ಹಾಗೂ ಮಾ. 2ರಂದು ಸಮಾರೋಪ ಸಮಾರಂಭ ನಡೆಯಲಿದೆ.
