ಬಂಟ್ವಾಳ: ವಾಹನ ಚಾಲಕರು ಪ್ರತಿಯೊಬ್ಬರೂ ವಾಹನ ಚಾಲನ ಪರವಾನಿಗೆ ಪಡಕೊಳ್ಳುವುದು ಕಡ್ಡಾಯ. ವಾಹನಗಳ ದಾಖಲೆಯನ್ನು ಪ್ರತಿವರ್ಷ ಸರಿಯಾಗಿ ನಿರ್ವಹಣೆ ಮಾಡುವುದರಿಂದ ಸರಕಾರಕ್ಕೆ ದಂಡ ಪಾವತಿಯನ್ನು ತಪ್ಪಿಸಬಹುದು ಎಂದು ಬಂಟ್ವಾಳ ಪ್ರಭಾರ ಸಹಾಯಕ ಪ್ರಾದೇಶಿಕ ಸಾರಿಗೆ ಅಬಕಾರಿ ಚರಣ್ ಅವರು ಹೇಳಿದರು.



ಪುಂಜಾಲಕಟ್ಟೆ ಆರಕ್ಷಕ ಠಾಣೆ ವತಿಯಿಂದ ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ.ಪೂ.ವಿಭಾಗದ ಸಹಕಾರದಲ್ಲಿ ಪುಂಜಾಲಕಟ್ಟೆಯಲ್ಲಿ ಗುರುವಾರ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಸರಕುಗಳನ್ನು ಆಟೊ ರಿಕ್ಷಾಗಳಲ್ಲಿ ಸಾಗಾಟ ಮಾಡಬಾರದು. ಆರ್.ಸಿ.ಯಲ್ಲಿ ನಿಗದಿಪಡಿಸಿದ ಸಂಖ್ಯೆಯ ಜನರನ್ನು ಮಾತ್ರ ಸಾಗಿಸಬೇಕು ಹಾಗೂ ಆಟೊ ರಿಕ್ಷಾಗಳ ಮುಂದಿನ ಸೀಟ್‌ಗಳಲ್ಲಿ ಜನರನ್ನು ಸಾಗಿಸಬಾರದು ಎಂದರು.

ತಗ್ಗಿ ಕಂಡಗು ಮೂಜಿ ಬುಲೆ ಎಂಬ ಗಾದೆ ಮಾತನ್ನು ನೆನಪಿಸಿ ಚಾಲನೆಯಲ್ಲಿ ತಾಳ್ಮೆ, ಸಹನೆ, ಮತ್ತು ನಿಗದಿತ ವೇಗದಲ್ಲಿ ವಾಹನ ಚಲಾಯಿಸಿ ಅಪಘಾತವನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು. ಇತ್ತಿಚಿನ ದಿನಗಳಲ್ಲಿ ಬದಲಾದ ದಂಡದ ಬಗ್ಗೆ ಮಾಹಿತಿ ನೀಡಿದರು. ಚಾಲಕರ ಹಾಗೂ ಮಾಲಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಪುಂಜಾಲಕಟ್ಟೆ ಪ.ಪ.ಪೂ. ಕಾಲೇಜು ಮೈದಾನದಿಂದ ಮಡಂತ್ಯಾರು ಪೇಟೆ ವರೆಗೆ ರಸ್ತೆ ಸುರಕ್ಷತಾ ಜಾಥ ನಡೆಸಲಾಯಿತು. ವಿದ್ಯಾರ್ಥಿಗಳು ಜಾಗೃತಿ ಫಲಕಗಳನ್ನು ಪ್ರದರ್ಶಿಸಿ, ಘೋಷಣೆ ನಡೆಸಿದರು.

ಈ ಸಂದರ್ಭದಲ್ಲಿ ಪುಂಜಾಲಕಟ್ಟೆ ಠಾಣಾಧಿಕಾರಿ ಸೌಮ್ಯಾ ಜೆ., ಪ.ಪೂ.ಕಾಲೇಜು ಉಪನ್ಯಾಸಕಿ ಮಮತಾ, ಪ್ರೌಢಶಾಲಾ ಶಿಕ್ಷಕ ಧರಣೇಂದ್ರ ಜೈನ್, ಪುಂಜಾಲಕಟ್ಟೆ ಪೊಲೀಸ್ ಠಾಣಾ ಸಿಬಂದಿಗಳು ಉಪಸ್ಥಿತರಿದ್ದರು.












