ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ|
ಉದ್ಯಾನವನದ ಹೂವೊಂದು ಬಿರಿದು ಕಂಪನ್ನು ಪಸರಿಸುವಂತೆ, ಅಂಬಿಗನೋರ್ವ ಅಲೆಗಳ ನಡುವೆ ನಾವೆಯನ್ನು ಮುನ್ನಡೆಸುವಂತೆ, ಎಲ್ಲರನ್ನೂ ಎಲ್ಲವನ್ನೂ ಸಮಚಿತ್ತದಿಂದ ಮುನ್ನಡೆಸಿ ಗಮ್ಯವನ್ನು ತಲುಪಿಸುವ ಕಾರ್ಯ ಪ್ರಾಂಶುಪಾಲರದು.
ಸತತ 37 ವರ್ಷಗಳ ಕಾಲ ವಿದ್ಯಾದಾನದ ಸೇವೆಗೈದು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿ ಜ್ಞಾನ ದೀವಿಗೆಯನ್ನು ಬೆಳಗಿದ ನಿಶ್ಕಲ್ಮಷ ಮನಸ್ಸಿನ ಹಸನ್ಮುಖಿ ವ್ಯಕ್ತಿತ್ವ, ಸದಾ ಸಹನಾಮೂರ್ತಿಯಂತಿದ್ದು ಕಾಲೇಜನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ ನಮ್ಮ ನೆಚ್ಚಿನ ಪ್ರಾಂಶುಪಾಲರ ಕಿರು ಪರಿಚಯವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಹರ್ಷಿಸುತ್ತಿದ್ದೇವೆ.
ಶಂಕರನಾರಾಯಣ ಭಟ್ ಮತ್ತು ವೆಂಕಟೇಶ್ವರಿ ದಂಪತಿಗಳ ಐದನೆಯ ಮಗನಾಗಿ ನವೆಂಬರ್ 23, 1961 ರಂದು ಕಾಸರಗೋಡಿನ ಕುಳಮರ್ವ ಮನೆತನದಲ್ಲಿ ಜನಿಸಿದರು. ಸಾಧಾರಣ ಕೃಷಿ ಕುಟುಂಬದಲ್ಲಿ ಜನಿಸಿದ ಇವರಿಗೆ ಉನ್ನತ ಗುಣಮಟ್ಟದ ಶಿಕ್ಷಣವೇನೂ ದೊರಕಲಿಲ್ಲ.
ಕುಂಟಿಕಾನ ಹಿರಿಯ ಬುನಾದಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಮಹಾಜನ ಸಂಸ್ಕೃತ ಕಾಲೇಜು (ಹೈಸ್ಕೂಲ್ ವಿಭಾಗ), ನೀರ್ಚಾಲು ಇಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಹಿರಿಯಡ್ಕ ಸರ್ಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿ, ಉಡುಪಿಯ ಎಮ್.ಜಿ.ಎಮ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಿದರು. “ಅದೃಷ್ಟವನ್ನು ನಂಬಿ ಪ್ರಯತ್ನವನ್ನು ಕೈ ಬಿಡಬಾರದು” ಎಂಬ ಮಾತಿನಂತೆ, ಪದವಿಯ ಶಿಕ್ಷಣದ ಸಮಯದಲ್ಲಿ ಆರ್ಥಿಕವಾಗಿ ಕೊಂಚ ತೊಂದರೆಗಳಾದಾಗ ವಿದ್ಯಾರ್ಥಿವೇತನ ಹಾಗೂ ಸಂಘ ಸಂಸ್ಥೆಗಳ ಧನ ಸಹಾಯದಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಎಲ್ಲಾ ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರಾದ ಇವರಿಗೆ ಪ್ರಾಥಮಿಕ ಶಾಲೆಯ ಇಂಗ್ಲೀಷ್ ಮೇಷ್ಟ್ರು ತಿರುಮಲೇಶ್, ಗಣಿತದ ಅಣ್ಣಪ್ಪ ಮೇಷ್ಟ್ರು ಅಚ್ಚುಮೆಚ್ಚಿನ ಶಿಕ್ಷಕರು. ಹೊಸಕೆರೆ ಶಿವಸ್ವಾಮಿಯವರು ಬೋಧಕರಾಗಲು ಪ್ರೇರಣೆಯಾದರು ಎಂಬುದನ್ನು ಶ್ರೀಯುತರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
ಎಳವೆಯಿಂದಲೇ ಸಾಹಿತ್ಯಾಭಿರುಚಿಯನ್ನು ಮೈಗೂಡಿಸಿಕೊಂಡಿದ್ದ ಇವರು ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯವನ್ನು ಆಯ್ಕೆಮಾಡಿಕೊಂಡರು. ಹವ್ಯಕ ಕನ್ನಡದ ಬಳಕೆ ಪಾರಂಪರಿಕ ಸಾಹಿತ್ಯಾಭಿರುಚಿಯನ್ನು ಬೆಳೆಸಿತು.
“ನೀನು ಮೇಷ್ಟ್ರು ಆಗ್ಲಿಕ್ಕೇ ಹುಟ್ಟಿದ್ದು ಕಣೋ” ಎಂದು ಹೊಸಕೆರೆ ಶಿವಸ್ವಾಮಿ ಮೇಷ್ಟ್ರು ಹೇಳಿದ ಮಾತು ಸಾಕಾರ ಆಗಿದ್ದು ಶೃಂಗೇರಿಯ ಜೆ.ಸಿ.ಬಿ.ಎಮ್ ಕಾಲೇಜಿನಲ್ಲಿ ಬೋಧನೆ ಆರಂಭಿಸಿದಾಗ. ವೃತ್ತಿ ಜೀವನದ ಆರಂಭದಲ್ಲಿ ಶಿಸ್ತುಬದ್ಧ ಕಾಲೇಜೊಂದಕ್ಕೆ ಬಡ್ತಿಹೊಂದಿದ್ದು ಖುಷಿಯ ವಿಚಾರ ಎನ್ನುತ್ತಾರೆ ಪ್ರಾಂಶುಪಾಲರು. ಆ ದಿನವನ್ನು ನೆನಪಿಸಿಕೊಳ್ಳುತ್ತಾ, ಜಡಿ ಮಳೆಯ ನಡುವೆಯೂ ಶೀಟ್ ಹಾಕಿದ ತರಗತಿಯಲ್ಲಿ ಪಾಠ ಮಾಡಿದ ಕ್ಷಣವನ್ನು ಹಂಚಿಕೊಂಡರು. ಇವರು ಸರಕಾರಿ ವಿಜ್ಞಾನ ಕಾಲೇಜು ಹಾಸನ,ಸರಕಾರಿ ಪ್ರಥಮದರ್ಜೆ ಕಾಲೇಜು ಬೆಳ್ತಂಗಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹೊಳೇನರಸೀಪುರ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ಸರಕಾರಿ ಪ್ರಥಮದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ತಮ್ಮ ಅಂತಿಮ ವೃತ್ತಿಬದುಕಿನ ದಿನಗಳನ್ನು ಕಳೆದರು. ಇವರು ಗಮಕ ಕಾರ್ಯಕ್ರಮವನ್ನು ನೀಡುತ್ತಾ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದರು.
ಪ್ರಾಂಶುಪಾಲರು ಹೇಳುವಂತೆ ಆಧುನಿಕ ಶಿಕ್ಷಣ ಪದ್ದತಿಗೂ ಅಂದಿನ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಅಂದಿನಿಂದಲೂ ಶಿಕ್ಷಣದ ಗುರಿ ಒಂದೇ ಆಗಿದೆ. ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಸೌಲಭ್ಯಗಳಲ್ಲಿ ಅಲ್ಪ ಮಟ್ಟದ ಕೊರತೆಯಿದ್ದರೂ ನೈತಿಕ ಮೌಲ್ಯ, ಪ್ರತಿಭೆಗಳಿಗೆ ಕೊರತೆಯಿಲ್ಲ.
ತನ್ನ ಎಮ್.ಎ ಶಿಕ್ಷಣದ ಸಮಯದಲ್ಲಿ ಕನ್ನಡಿಯ ಬಳಕೆ ಹಾಗೂ ಕಾಫಿ ಕುಡಿಯುವುದು ಎರಡು ವರ್ಷಗಳ ಮಟ್ಟಕ್ಕೆ ಮರೆತೇ ಹೋಗಿತ್ತು ಎಂದು ಹೇಳುತ್ತಾರೆ. ತುಂಟತನದಲ್ಲಿ ತೊಡಗುವಿಕೆಯಿಲ್ಲವಾದರೂ ಸ್ನೇಹಿತರ ಸಹವಾಸದಿಂದ ಶಿಕ್ಷಕರ ಕೆಂಗಣ್ಣಿಗೆ ಗುರಿಯಾದದ್ದು ಇದೆ ಎಂದು ಸೆನಪಿಸಿಕೊಂಡು ಮುಗುಳ್ನಗುತ್ತಾರೆ.
ತಾನು ಕಾಸರಗೋಡಿನಲ್ಲಿದ್ದರೂ ತನ್ನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪೂರೈಸಿರುವುದು ಕೂಡ ಶ್ರೀಯುತರ ಕನ್ನಡಾಭಿಮಾನವನ್ನು ಪ್ರತಿಫಲಿಸುತ್ತದೆ.
1991ರ ಮೇ 15 ರಂದು ವಸಂತಿಯವರೊಂದಿಗೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿಶೇಷವೆಂದರೆ ವಸಂತಿಯವರು ಇವರ ವಿದ್ಯಾರ್ಥಿನಿಯೂ ಆಗಿದ್ದರು. ಇವರು 15 ವರ್ಷ ಪುಂಜಾಲಕಟ್ಟೆ ಹೈಸ್ಕೂಲಿನಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸರಕಾರಿ ಪದವಿಪೂರ್ವ ಕಾಲೇಜು ನಡ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿಗಳಿಗೆ ಶಶಾಂಕ್, ಸ್ವಸ್ತಿಕ್ ಮತ್ತು ಸಾತ್ವಿಕ್ ಎಂಬ ಮೂವರು ಗಂಡುಮಕ್ಕಳು.
ಕಲಿಕೆಯ ವಿಷಯದಲ್ಲಿ ಮೂವರು ಮಕ್ಕಳು ಉನ್ನತ ಶ್ರೇಣಿಯಲ್ಲಿದ್ದರು. ಶಶಾಂಕ್ ಇವರು ಎನ್.ಐ.ಟಿ.ಕೆ ಯಲ್ಲಿ ಪಿ.ಎಚ್.ಡಿ ಪದವಿಗಾಗಿ ಅಧ್ಯಯನ ನಡೆಸುತ್ತಿದ್ದಾರೆ.
ಸ್ವಸ್ತಿಕ್ ಬ್ಯಾಂಕಿಂಗ್ ಉದ್ಯೋಗದಲ್ಲಿದ್ದರೆ, ಸಾತ್ವಿಕ್ ಭಾರತೀಯ ಸೇನೆಯಲ್ಲಿ ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದಾರೆ.
“ಸಹನೆ ವಜ್ರದ ಕವಚ” ಎಂಬ ಮಾತಿನಂತೆ ಪ್ರಾಂಶುಪಾಲರ ನಡತೆ ಸಿದ್ಧಾಂತ ಸೇವಾನುಭವ ಇತರರಿಗೆ ಮಾದರಿ. ನಕರಾತ್ಮಕ ಚಿಂತನೆ ಮತ್ತು ವೈರಾಗ್ಯ ಎಂಬ ವಿಷವನ್ನು ಮನದೊಳಗಿಂದ ತೆಗೆದುಹಾಕಬೇಕೆಂಬುವುದು ಶ್ರೀಯುತರ ಅಭಿಪ್ರಾಯ. ತನ್ನ ಬಾಲ್ಯದಿಂದಲೇ ವಿನಯತೆ ಹಾಗು ಮುಗ್ಧಭಾವನೆಗಳ ಅನಾವರಣಕ್ಕೆ ಇವರ ಸರಳ ಬದುಕು ನಾಂದಿಯಾಗಿತ್ತು. ಸಂದಿಗ್ಧ ಪರಿಸ್ಥಿತಿಯನ್ನು ಶಾಂತಿಯಿಂದ ನಿಭಾಯಿಸುವುದು ಜಾಣತನ. ‘ಸಮಯವನ್ನು ನಾವು ನಿರ್ವಹಣೆ ಮಾಡಿಕೊಂಡು ಸಾಗಬೇಕು, ಹೊರತಾಗಿ ಸಮಯ ನಮ್ಮನ್ನಲ್ಲ’, ‘ಎಡವುದು ಸಹಜ ಎಡವಿ ಕಲಿಯುವುದು ಮುಖ್ಯ’, ‘ಎಲ್ಲರೊಳಗೊಂದಾಗು’, ‘ಮೊದಲು ಮಾನವನಾಗು’ ಎಂಬ ಸಿದ್ಧಾಂತ ಶ್ರೀಯುತರದ್ದು. ಜೊತೆಗೆ ಮೊದಲು ತಾನು ಸಮಾಜದ ಉತ್ತಮ ಮೌಲ್ಯವನ್ನು ಅನುಕರಣೆ ಮಾಡಿ ನಂತರ ಅದನ್ನು ಸಮಾಜಕ್ಕೆ ಸಾರಬೇಕೆಂಬುದು ಇವರ ನಿಲುವು.
ಭಾಷಾ ವಿಷಯಕ್ಕೆ ಬಂದರೆ ತುಳುವರು ಕನ್ನಡಿಗರಾಗಿ, ಕನ್ನಡಿಗರು ಎಲ್ಲರಳಗೊಂದಾಗಿ ಭಾಷಾಭಿಮಾನವನ್ನ ಬೆಳೆಸಿಕೊಂಡು ಅನ್ಯಭಾಷಿಕರಲ್ಲೂ ಭಾತೃತ್ವ ಬೆಳೆಸಬೇಕು ಎಂದು ಹೇಳುತ್ತಾರೆ.
“ಸಿಂಪಲ್ ಆಂಡ್ ಬಿ ಸ್ಯಾಂಪಲ್” ಎಂಬ ಮಾತಿಗೆನುಸಾರವಾಗಿ ಪ್ರಾಂಶುಪಾಲರ ಜೀವನಾನುಭವವನ್ನು ಚಿತ್ರಿಸುತ್ತಾ ಸಾಗಬಹುದು. ವೃತ್ತಿ ಜೀವನ ಒಂದು ಸುಧೀರ್ಘ ಪಯಣ, ನಂತರ ನಿವೃತ್ತಿಯೆಂಬ ವಿರಾಮ. ಸಾವಿರ ಸಾವಿರ ವಿದ್ಯಾರ್ಥಿಗಳು, ಅದೆಷ್ಟೋ ಶೈಕ್ಷಣಿಕ ಸಂಸ್ಥೆಗಳು, ಉನ್ನತ ಮಟ್ಟದ ಅನುಭವವನ್ನು ತಮ್ಮ ಮನಸೆಂಬ ಜೋಪಡಿಯಲ್ಲಿ ಬಂಧಿಯಾಗಿಸಿದ್ದಾರೆ ಎಂಬುದು ವಾಸ್ತವ ಸತ್ಯ. ಆದರ್ಶ ವ್ಯಕ್ತಿಯೊಬ್ಬರ ಬದುಕನ್ನು ಸಾಲುಗಟ್ಟಲೆ, ಪುಟಗಟ್ಟಲೆ ಬರೆದರೂ ಸಾಲದು ಎಂಬುದೇ ಬರೆದರವರ ಅಭಿಪ್ರಾಯ.

