ಬಂಟ್ವಾಳ : ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಗಂಪದಡ್ಡ ಎಂಬಲ್ಲಿ ವ್ಯಕ್ತಿಯೊಬ್ಬ ಇಸ್ಪೀಟ್ ಚಟಕ್ಕಾಗಿ ತನ್ನದೇ ಮನೆಯ ನಗ, ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಂಜಾಲಕಟ್ಟೆ ಪೊಲೀಸರು ಆರೋಪಿಯನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಗಂಪದಡ್ಡ ನಿವಾಸಿ ಯೂಸೂಫ್ ಬ್ಯಾರಿ ಯವರ ಮಗ ಸಾಧಿಕ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಪೊಲೀಸರು 62 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿರುತ್ತಾರೆ. ಇದರ ಒಟ್ಟು ಮೌಲ್ಯ ಒಂದು ಲಕ್ಷದ ಎಂಭತ್ತೆರಡು ಸಾವಿರ ರೂಪಾಯಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಎಪ್ರಿಲ್ 19 ಯೂಸುಫ್ ಬ್ಯಾರಿ ಅವರ ಮನೆಯ ಹಿಂಬಾಗಿಲನ್ನು ಒಡೆದು ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿನ ಕಬ್ಬಿಣದ ಬೀರುವನ್ನು ಹರಿತ ಆಯುಧದಿಂದ ಮೀಟಿ ಬೀರುವಿನೊಳಗಿದ್ದ ಚಿನ್ನದ ಒಡವೆಗಳು ಹಾಗೂ ನಗದು ಹಣವನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್, ಎಡಿಶನಲ್ ಎಸ್ಪಿ ವಿಕ್ರಮ್ ಅಮಟೆ ಹಾಗೂ ಬಂಟ್ವಾಳ ಎಎಸ್ಪಿ ಸೈದುಲ್ ಅದಾವತ್ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಿಐ ಸಂದೇಶ್, ಪೂಂಜಾಲಕಟ್ಟೆ ಪಿಎಸ್ಸೈ ಕೆ ಆರ್ ಸುನಿತ ಅವರು ತನಿಖೆ ಕೈಗೊಂಡು ಕಾರ್ಯಾಚರಣೆ ನಡೆಸಿ ಪ್ರಕರಣದ ಫಿರ್ಯಾದಿಯಾಗಿರುವ ಸಾದಿಕ್ ನನ್ನು ಬಂಧಿಸಿದ್ದಾರೆ. ಈತ ಇಸ್ಪೀಟ್ ಆಟದ ಚಟಕ್ಕೆ ಹಣಕಾಸು ಹೊಂದಿಸಲು ಈ ಕಳವು ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.