ವಿಟ್ಲ: ಪುಣಚ ಗ್ರಾಮದ ಕೃಷ್ಣಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬ ಮತ್ತು ಕೃಷ್ಣಗಿರಿ ಗೆಳೆಯರ ಬಳಗ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವ ನಡೆಯಿತು.

ಸಭಾ ಕಾರ್ಯಕ್ರಮವನ್ನು ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಪಟಿಕ್ಕಲ್ಲು ಉದ್ಘಾಟಿಸಿದರು.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಶಿಸ್ತು ಬದ್ಧತೆಯಿರುವ ಸಂಘಟನೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯ. ಪ್ರತಿಯೊಂದು ಸನ್ನಿವೇಶದಲ್ಲಿ ಸಮಯ ಪ್ರಜ್ಞೆ ಪ್ರಾಮುಖ್ಯತೆ ಪಡೆದಿದೆ. ಊರಿನ ಶಾಲೆಯ ಅಭಿವೃದ್ಧಿಗೆ ಶಿಕ್ಷಣ ಅಭಿಮಾನಿಗಳು ಕಟಿಬದ್ಧರಾಗಿರುವುದು ಸಂತೋಷಕರ ಸಂಗತಿ ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಔಷಧಿ ತಜ್ಞ, ವಾಗ್ಮಿ ಸುರೇಶ್ ಪರ್ಕಳ ಮಾತನಾಡಿ ಅಮ್ಮ ಮತ್ತು ಅನ್ನ ಜೀವನ ಪೂರ್ತಿ ಮರೆಯಲಾಗದ ವಿಚಾರವಾಗಿದೆ. ಶಾಲೆಗಳು ಬಾಹ್ಯ ಶಿಕ್ಷಣದೊಂದಿಗೆ ದೇಶಭಕ್ತಿಯ ಅನುಭವ ನೀಡುವ ಕೇಂದ್ರಗಳಾಗ ಬೇಕು. ಕನ್ನಡ ಭಾಷಾಭಿಮಾನ ನಿರಂತರವಾಗಿ ಉಳಿದು ಬೆಳೆಯಲು ಸರಕಾರಿ ಶಾಲೆಗಳು ಬೆಳೆಯಬೇಕು ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಪಂಚಾಯತ್ ಸದಸ್ಯರಾದ ಪ್ರತಿಭಾ ಗೌಡ ನಿಡ್ಯಾಳ, ಹರೀಶ್ ದಲ್ಕಜೆ, ಬಂಟ್ವಾಳ ಆರಕ್ಷಕ ಠಾಣೆಯ ಎಎಸ್ಐ ರಾಧಾಕೃಷ್ಣ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ, ಚಲನ ಚಿತ್ರ ನಟಿ ಹರಿಣಿ ನಟರಾಜ್, ಪುತ್ತೂರಿನ ಉದ್ಯಮಿ ಜಗನ್ನಾಥ ಗೌಡ, ಬೆಂಗಳೂರು ಗರುಡ ಡಿಟೆಕ್ಟಿವ್ ಎಂ.ಡಿ.ಆಫ್ ಶ್ರೀನಿವಾಸ ವಿ., ಪಾರ್ಟನರ್ ನಾಗೇಶ್ವರ ರೆಡ್ಡಿ, ಎಂ.ಜೆ.ಗ್ರೂಪ್ ವೆಂಚರ್ಸ್ ಕಂಪೆನಿ ಸೆಕ್ರೆಟರಿ ರೂಪಶ್ರೀ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ, ಸಾಧಕರಿಗೆ, ಶಿಕ್ಷಕರಿಗೆ ಸನ್ಮಾನ ನಡೆಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪುತ್ತೂರು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ವರದಾಕ್ಷಿ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಜಯಶ್ರೀ ಶಾಲಾ ವರದಿ ವಾಚಿಸಿದರು. ಕೃಷ್ಣಗಿರಿ ಗೆಳೆಯರ ಬಳಗ ಟ್ರಸ್ಟ್ ಅಧ್ಯಕ್ಷ ರಾಜೇಶ್ ನಿಡ್ಯಾಳ ಟ್ರಸ್ಟ್ ಚಟುವಟಿಕೆ ವರದಿ ವಾಚಿಸಿದರು.
ವಾರ್ಷಿಕೋತ್ಸವದ ಪ್ರಯುಕ್ತ ಕೃಷ್ಣಗಿರಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಕಲಾ ಮಂಡಳಿ ಸದಸ್ಯರಿಂದ ‘ವಜ್ರಲೇಖ ಪರಿಣಯ’, ಸ್ಥಳೀಯ ಹಾಗೂ ಅತಿಥಿ ಕಲಾವಿದರಿಂದ ತುಳು ಐತಿಹಾಸಿಕ ಭಕ್ತಿ ಪ್ರಧಾನ ನಾಟಕ’ ಕಲ್ಜಿಗದ ಸಿರಿ ಸತ್ಯೊಲು ‘ಸತ್ಯ ಸಾರಮಾಣಿಲು’ ನಾಟಕ ಪ್ರದರ್ಶನಗೊಂಡಿತು.