ವಿಟ್ಲ: ಪುಣಚ ಗ್ರಾಮದ ಆಜೇರು ಮಲ್ಯ ಅನಾವುಗುಡ್ಡೆಯ ರಸ್ತೆಗೆ ಡಾಂಬರೀಕರಣ ಮತ್ತು ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಜೂನ್ 10ರಂದು ಪುಣಚ ಗ್ರಾಮ ಪಂಚಾಯಿತಿ ಮುಂಭಾಗ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು.
ಅವರು ಗುರುವಾರ ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪುಣಚ ಗ್ರಾಮದ ಆಜೇರು ಎಂಬಲ್ಲಿ ಪರಿಶಿಷ್ಟ ಪಂಗಡದವರು ಹಾಗೂ ಇತರ ಜಾತಿಯವರು ವಾಸ ಮಾಡುವ ಹಲವು ಕುಟುಂಬಗಳಿವೆ. ಇಲ್ಲಿಗೆ ತೆರಳುವ ರಸ್ತೆಗೆ ಡಾಂಬರೀಕರಣಗೊಂಡಿಲ್ಲ. ಈ ಭಾಗದಲ್ಲಿ ನೀರಿನ ಸಮಸ್ಯೆವೂ ಇದೆ. ಡಾಂಬರೀಕರಣ ಹಾಗೂ ಶಾಸ್ವತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಈ ಹಿಂದೆ ಸಂಬಂಧಪಟ್ಟ ಇಲಾಖೆಗೆ, ಶಾಸಕರಿಗೆ, ಸಂಸದರಿಗೆ, ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿತ್ತು. ಬಳಿಕ ಅಲ್ಪ ಡಾಂಬರೀಕರಣ ಮಾಡುವ ಮೂಲಕ ಇಲ್ಲಿನ ನಿವಾಸಿಗಳ ಕಣ್ಣೊರೆಸುವ ತಂತ್ರ ರೂಪಿಸಿದ್ದರು. ಬಳಿಕ ಚುನಾವಣೆ ಬಹಿಷ್ಕಾರ ಹಿಂತೆಗೆದುಕೊಳ್ಳಲಾಗಿತ್ತು. ಇದೀಗ ಈ ಭಾಗಕ್ಕೆ ಡಾಂಬರೀಕರಣ ನಡೆಸಬೇಕು. ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಮಸ್ಯೆ ಈಡೇರದಿದ್ದಲ್ಲಿ ಪ್ರತಿಭಟನೆ ರಾತ್ರಿವರೆಗೂ ಮುಂದುವರೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ತಿಮ್ಮಣ್ಣ ಆಜೇರು, ಸುರೇಶ್ ಆಜೇರು, ಕೃಷ್ಣ ನಾಯ್ಕ ಮಲ್ಯ, ಪ್ರಸಾದ್ ಅನಂತಾಡಿ ಉಪಸ್ಥಿತರಿದ್ದರು.
