ವಿಟ್ಲ: ಶ್ರೀದೇವಿ ವಿದ್ಯಾಕೇಂದ್ರದಲ್ಲಿ ಹೊಸ ಮಕ್ಕಳಿಗೆ ಸ್ವಾಗತ ಕಾರ್‍ಯಕ್ರಮವನ್ನು ಹಬ್ಬದ ರೀತಿ ಆಚರಿಸಲಾಯಿತು. ಶಾಲೆಗೆ ಹೊಸತಾಗಿ ಸೇರ್ಪಡೆಯಾದ ಮಕ್ಕಳನ್ನು ಶಿಕ್ಷಕಿಯರು ಆರತಿ ಬೆಳಗಿ ಸ್ವಾಗತಿಸಿದರು. ಮಕ್ಕಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ತಂದೆ-ತಾಯಿಯ ಆಶೀರ್ವಾದ ಪಡೆದರು.
ಜ್ಯೋತಿ ಬೆಳಗಿಸಿ ಕಾರ್‍ಯಕ್ರಮ ಉದ್ಘಾಟಿಸಿದ ಗುರುವಾಯನಕೆರೆಯ ಉದ್ಯಮಿ ಬಾಲಕೃಷ್ಣ ಸಿ ನಾಯಕ್ ಮಾತನಾಡಿ ಶಾಲೆಯಲ್ಲಿ ಕಲಿತ ಶಾಲೆಯ ನೆನಪು ಶಾಶ್ವತ, ಕಷ್ಟದಿಂದ ಮೇಲೆ ಬಂದಾಗಲೇ ಜೀವನದ ನಿಜ ಅನುಭವವಾಗುವುದು ಎಂದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀರಾಮಚಂದ್ರ ಭಟ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ, ಪ್ರಗತಿಪರ ಕೃಷಿಕ ರಾಜಗೋಪಾಲ ಭಟ್ ಉಬರು ಶಾಲೆಗೆ ಸ್ಮಾರ್ಟ್‌ಕ್ಲಾಸಿನ ಕೊಡುಗೆ ನೀಡಿ ಉದ್ಘಾಟಿಸಿದರು. ಇನ್ನೋರ್ವ ಹಿರಿಯ ವಿದ್ಯಾರ್ಥಿ ಹರೀಶ್ ಆಜೇರು ಬಯೋಕಾನ್ ಬೆಂಗಳೂರು ಹುಟ್ಟುಹಾಕಿದ ’ಶಾಲಾ ಜಾಲತಾಣ’ ವನ್ನು ಅನಾವರಣಗೊಳಿಸಿದರು .
ಈ ಸಂದರ್ಭ 2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ. ಪರೀಕ್ಷೆಯಲ್ಲಿ 94% ಫಲಿತಾಂಶ ತಂದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರೌಢ ಶಾಲಾ ಮುಖ್ಯಶಿಕ್ಷಕಿ ಗಂಗಮ್ಮ ಅಭಿನಂದಿಸಿದರು. ಶಾಲಾ ಸಂಚಾಲಕರಾದ ನೀರ್ಕಜೆ ಜಯಶ್ಯಾಂ ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲೋಕೇಶ್ ವಂದಿಸಿದರು. ನಂತರ ಶಿಕ್ಷಕ ರಕ್ಷಕ ಸಭೆ ನಡೆಯಿತು. ಸಹ ಶಿಕ್ಷಕಿಯರಾದ ರಜನಿ, ಶ್ವೇತಾ, ಸವಿತಾ ಕಾರ್‍ಯಕ್ರಮ ನಿರೂಪಿಸಿದರು.
