ವಿಟ್ಲ: ಪುಣಚ ಗ್ರಾಮದ ಕೃಷ್ಣಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬ ಮತ್ತು ಕೃಷ್ಣಗಿರಿ ಗೆಳೆಯರ ಬಳಗ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವ ಫೆ. 24ರಂದು ಜರಗಲಿದೆ ಎಂದು ಶಾಲೆ ಮುಖ್ಯ ಶಿಕ್ಷಕಿ ವರದಾಕ್ಷಿ ಶೆಟ್ಟಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ಳಿ ಹಬ್ಬದ ಅಂಗವಾಗಿ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸುವರು. ಪುಣಚ ಗ್ರಾಮ ಪಂಚಾಯತಿ ಅಧ್ಯಕ್ಷೆ ಬೇಬಿ ಪಟಿಕಲ್ ಅಧ್ಯಕ್ಷತೆ ವಹಿಸುವರು.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸುರೇಶ್ ಪರ್ಕಳ ಉಪನ್ಯಾಸ ನೀಡಲಿದ್ದು, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪುತ್ತೂರು ಅವರು ಕೃಷ್ಣಗಿರಿ ಗೆಳೆಯರ ಬಳಗ ಟ್ರಸ್ಟ್ ಕಳೆದ 5 ವರ್ಷಗಳ ಹಿಂದೆ ಸ್ಥಾಪನೆಗೊಂಡಿದ್ದು ಶೈಕ್ಷಣಿಕ , ಸಾಮಾಜಿಕ, ಕ್ರೀಡೆ, ಸಂಘಟನಾತ್ಮಕ ಕಾರ್ಯಗಳನ್ನು ನಡೆಸುತ್ತಿದೆ.
ಕೃಷ್ಣಗಿರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಶಾಲೆಯನ್ನು ಸರ್ವತೋಮುಖ ಅಭಿವೃದ್ಧಿಗೊಳಿಸುವ ಯೋಜನೆಯಿದೆ. ಐದನೇ ವಾರ್ಷಿಕೋತ್ಸವದ ಪ್ರಯುಕ್ತ ಕೃಷ್ಣಗಿರಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಕಲಾ ಮಂಡಳಿ ಸದಸ್ಯರಿಂದ ‘ವಜ್ರಲೇಖ ಪರಿಣಯ’, ತುಳು ಐತಿಹಾಸಿಕ ಭಕ್ತಿ ಪ್ರಧಾನ ನಾಟಕ’ ಕಲ್ಜಿಗದ ಸತ್ಯ ಸಾರಮಾಣಿಲು’ ನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿ ಪುರಂದರ ಶೆಟ್ಟಿ, ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.