ಬಂಟ್ವಾಳ: ಸಾಹಿತ್ಯ, ನಾಡು-ನುಡಿ, ನೆಲ-ಜಲದ ಕುರಿತು ಕಳೆದ ಹಲವು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ತಾನು ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ.ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಹಲವು ಯೋಜನೆಗಳೊಂದಿಗೆ ಕಸಾಪವನ್ನು ಜನಸಾಮಾನ್ಯರ ಪರಿಷತ್ತಾಗಿಸುವ ಪರಿವರ್ತಿಸುವುದೇ ತನ್ನ ಪ್ರಮುಖ ಉದ್ದೇಶ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ| ಎಂ.ಪಿ.ಶ್ರೀನಾಥ್ ಹೇಳಿದರು.

ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದ.ಕ.ಜಿಲ್ಲಾ ಕಸಾಪವನ್ನು ಕ್ರೀಯಾಶೀಲವಾಗಿ ಕಟ್ಟುವ ಹಾಗೂ ಪುನರ್ ರೂಪಿಸುವ ಅಗತ್ಯವಿದ್ದು, ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ. ಪ್ರತಿಭಾವಂತ ಸಾಹಿತಿಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಕಾರ್ಯವೂ ಆಗಬೇಕಿದೆ.
ಜತೆಗೆ ಪರಿಷತ್ತಿನ ಸದಸ್ಯತ್ವ ಹೆಚ್ಚಳದ ಅಗತ್ಯವಿದ್ದು, ಅದರ ಕಾರ್ಯವನ್ನೂ ಮುಂದೆ ನಡೆಸಲಿದ್ದೇನೆ. ಹೀಗೆ ಹಲವಾರು ಯೋಜನೆಗಳನ್ನು ಮುಂದಿಟ್ಟುಕೊಂಡು ಸ್ಪರ್ಧೆಗೆ ಇಳಿದಿದ್ದು, ಜಿಲ್ಲೆಯಲ್ಲಿ ಸುಮಾರು ೪೫೦೦ ಮಂದಿ ಪರಿಷತ್ತಿನ ಸದಸ್ಯರಿದ್ದು, ಬಂಟ್ವಾಳ ತಾಲೂಕಿನಲ್ಲಿ ೪೦೦ಕ್ಕೂ ಅಽಕ ಮಂದಿ ಸದಸ್ಯರಿದ್ದಾರೆ. ಅವರೆಲ್ಲರನ್ನೂ ತಲುಪುವ ಪ್ರಯತ್ನ ಮಾಡಿ ಬೆಂಬಲಿಸುವಂತೆ ತಿಳಿಸಲಾಗುತ್ತಿದೆ.
೨೬ ವರ್ಷಗಳ ಭೋದನಾ ಅನುಭವದ ಜತೆಗೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ ಅನುಭವವಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳೂ ಸೇರಿದಂತೆ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ದುಡಿದಿದ್ದು, ೨೦೦೯ರ ವಿಶ್ವ ತುಳು ಸಮ್ಮೇಳನದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇವೆ. ಜೇಸಿಐ ಅಧ್ಯಕ್ಷ ಸೇರಿದಂತೆ ಸಾಮಾಜಿಕ ಕಾರ್ಯಗಳಲ್ಲಿ ಸಕ್ರೀಯನಾಗಿ ದುಡಿದಿದ್ದು, ಈ ಎಲ್ಲಾ ಅನುಭವಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದು, ಪರಿಷತ್ತಿನ ಸದಸ್ಯರು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸರಪಾಡಿ ಅಶೋಕ ಶೆಟ್ಟಿ, ಮಂಜು ವಿಟ್ಲ, ಸುಭಾಶ್ಚಂದ್ರ ಜೈನ್, ಜಯಾನಂದ ಪೆರಾಜೆ, ವಿಶ್ವನಾಥ್ ಬಂಟ್ವಾಳ ಉಪಸ್ಥಿತರಿದ್ದರು.

