ಬಂಟ್ವಾಳ: ಪ್ರವಾದಿ ನಿಂದನೆ ಮಾಡಿದ ಖಾಸಗಿ ಸುದ್ದಿವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕರ ವಿರುದ್ಧ ಮತ್ತೊಮ್ಮೆ ತನಿಖೆ ನಡೆಸಿ, ಸೂಕ್ತ ಕಾನೂನು ಕೈಗೊಳ್ಳುವಂತೆ ಒತ್ತಾಯಿಸಿ ಫೆ. 8ರಂದು ಮಧ್ಯಾಹ್ನ 3ಗಂಟೆಗೆ ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಖಂಡನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮುಸ್ಲಿಂ ಒಕ್ಕೂಟ ಬಂಟ್ವಾಳ ಇದರ ಅಧ್ಯಕ್ಷ ಕೆ.ಎಚ್.ಅಬೂಬಕರ್ ತಿಳಿಸಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳ ಬ್ಯಾರಿ ಫೌಂಡೇಶನ್, ಮುಸ್ಲಿಂ ಸಮಾಜ ಬಂಟ್ವಾಳ, ಮುಸ್ಲಿಂ ಒಕ್ಕೂಟ ಬಂಟ್ವಾಳ, ಅಖಿಲ ಭಾರತ ಬ್ಯಾರಿ ಪರಿಷತ್ ಹಾಗೂ ದಫ್ ಅಸೋಸಿಯೇಶನ್, ಉಡುಪಿ ಮತ್ತು ದ.ಕ. ಜಿಲ್ಲೆ ಇದರ ನೇತೃತ್ವದಲ್ಲಿ ಈ ಖಂಡನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾದಿ ನಿಂದನೆಯ ಬಗ್ಗೆ ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ 800ಕ್ಕೂ ಹೆಚ್ಚು ದೂರು ದಾಖಲಾಗಿವೆ. ಅಲ್ಲದೆ, ಎಫ್ಐಆರ್ ದಾಖಲಾಗಿದ್ದೂ ಇಲ್ಲಿಯವರೆಗೂ ಪ್ರವಾದಿ ನಿಂದಕನನ್ನು ಬಂಧಿಸಿಲ್ಲ. ಅಲ್ಲದೆ, ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೇ ವಜಾ ಮಾಡಿದೆ ಎಂದು ಹೇಳಿದರು.
ವಿಶ್ವ ಮಾನವ ಕುಲದ ವಿಮೋಚಕ, ಲೋಕ ನಾಯಕ ಪ್ರವಾದಿ ಅವರ ನಿಂದನೆ ಅತ್ಯಂತ ಗಂಭೀರ ವಿಷಯವಾಗಿದೆ. ಹಿಂದೊಮ್ಮೆ ಡೆನ್ಮಾರ್ಕ್ ನ ಪತ್ರಿಕೆಯೊಂದು ಪ್ರವಾದಿ ಅವರನ್ನು ನಿಂದಿಸಿದಾಗ ಅನೇಕ ಜೀವಗಳು ಬಲಿಯಾಗಿದ್ದವು. ಅಜಿತ್ ನ ಪ್ರಕರಣದಲ್ಲಿ ನಮ್ಮ ಸಮುದಾಯ ಬಾಂಧವರು ಅತ್ಯಂತ ತಾಳ್ಮೆಯಿಂದ ವರ್ತಿಸಿರುವುದು ನಾವೆಲ್ಲರೂ ಅಭಿಮಾನ ಪಡಬೇಕಾದ ವಿಚಾರ. ಆದರೆ, ನಾವು ನಮ್ಮ ತಂದೆ ತಾಯಿಗಿಂತ, ನಮ್ಮ ಸ್ವಂತ ಶರೀರಕ್ಕಿಂತ ಹೆಚ್ಚಾಗಿ ಪ್ರೀತಿಸುವ ನಮ್ಮ ಪ್ರವಾದಿ ಅವರ ನಿಂದನೆ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.
ಪ್ರವಾದಿಯನ್ನು ತುಚ್ಚವಾಗಿ ಮಾತಾಡಿ ಅಜಿತ್ನನ್ನು ಮತ್ತೊಮ್ಮೆ ತನಿಖೆಗೊಳಪಡಿಸಿ, ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸರಕಾರ ಹಾಗೂ ಸಂಬಂದಪಟ್ಟ ಅಧಿಕಾರಿಗಳಿಗೆ ಈ ಮೂಲಕ ಒತ್ತಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರಾದ ಪಿ.ಎ.ರಹೀಂ, ಅಬೂಬಕರ್ ಪಲ್ಲಮಜಲು, ಇಕ್ಬಾಲ್ ಐಎಂಆರ್, ಅಬೂಬಕರ್ ಪಲ್ಲಮಜಲು, ಇಬ್ರಾಹಿಂ ಕೈಲಾರ್ ಉಪಸ್ಥಿತರಿದ್ದರು.

