ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಎಸ್ಪಿ ಯಾಗಿದ್ದ ಬಿ.ಎಂ.ಲಕ್ಷ್ಮೀಪ್ರಸಾದ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಯಾಗಿ ರಾಜ್ಯ ಸರಕಾರ ನೇಮಕ ಮಾಡಿದೆ.


ಲಕ್ಷ್ಮೀಪ್ರಸಾದ್ 2014ರ ಐಪಿಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ. ಬೆಂಗಳೂರು ನಿವಾಸಿಯಾಗಿರುವ ಲಕ್ಷ್ಮೀ ಪ್ರಸಾದ್ ಅವರು, ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಸುಮಾರು 5 ವರ್ಷ ಎಚ್ ಪಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು.
ಪೊಲೀಸ್ ಇಲಾಖೆಯಲ್ಲಿ ವಿಜಯಪುರ ಜಿಲ್ಲಾ ಎಸ್‌ಪಿ, ಕಾರ್ಕಳ ಎಎನ್ ಎಫ್ ಎಸ್‌ಪಿಯಾಗಿಯೂ ಲಕ್ಷ್ಮೀ ಪ್ರಸಾದ್ ಸೇವೆ ಸಲ್ಲಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದ ಡಾ.ರವಿಕಾಂತೇಗೌಡ ಅವರಿಗೆ ಡಿಐಜಿಯಾಗಿ ಬಡ್ತಿ ನೀಡಲಾಗಿದ್ದು, ಅವರನ್ನು ಬೆಂಗಳೂರಿನ ಪೊಲೀಸ್ ಅಗ್ನಿಶಾಮಕ ಸೇವೆಗಳ ಡಿಐಜಿಯಾಗಿ ವರ್ಗಾವಣೆ ಮಾಡಲಾಗಿದೆ.