ಕೀರ್ತಿರಾಜ್ ಕರಂದಾಡಿ

ಮಂಗಳೂರು: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರೀ ದೇಗುಲದಲ್ಲಿ ಒಂದೆಡೆ ಧಾರ್ಮಿಕ ವಿಧಿ ವಿಧಾನ, ಸಂಭ್ರಮ ವೀಕ್ಷಿಸಲು ನಾಡಿನ ಮೂಲೆಮೂಲೆಗಳಿಂದ ಭಕ್ತ ಪ್ರವಾಹವೇ ಹರಿದುಬರುತ್ತಿದೆ. ಇಲ್ಲಿಗೆ ಆಗಮಿಸಿದ ಎಲ್ಲರ ಬಾಯಲ್ಲೂ ಅಚ್ಚುಕಟ್ಟಾದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳೇ ಕೇಳಿಬರುತ್ತಿವೆ.
ಪ್ರತಿದಿನ ಪೊಳಲಿಗೆ ಆಗಮಿಸುವ ಸಹಸ್ರಾರು ಭಕ್ತರಿಗೆ ಎಲ್ಲೂ ಯಾವುದೇ ರೀತಿಯಲ್ಲಿಯೂ ಲೋಪವಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡು ವುದು ಸಾಮಾನ್ಯ ವಿಷಯವೇನಲ್ಲ. ಇದು ಹೇಗೆ ಸಾಧ್ಯವಾಯಿತು? ಎಂದು ಪ್ರಶ್ನಿಸಿದರೆ ಪೊಳಲಿ ಅಮ್ಮನತ್ತ ತಿರುಗಿ ಮುಗುಳ್ನಗುತ್ತಾರೆ ದೇವದಾಸ ಶೆಟ್ಟಿ.
ದೇವದಾಸ ಶೆಟ್ಟಿ ಇಲ್ಲಿನ ಸಂಪರ್ಕ ಕಾರ್ಯಾಲಯದ ಅಧ್ಯಕ್ಷರು. ಪಾರ್ಕಿಂಗ್, ಭೋಜನ, ಪಾಕಶಾಲೆ, ರಕ್ಷಣೆ, ಅತಿಥಿ ಸತ್ಕಾರ… ಹೀಗೆ ಪ್ರತಿ ಯೊಂದು ವ್ಯವಸ್ಥೆಯ ಹೊಣೆ ಹೊತ್ತವರು. ನಗುಮುಖದಿಂದಲೇ ಸ್ವಯಂಸೇವಕರನ್ನು ಹುರಿ ದುಂಬಿಸುತ್ತಾ, ಮಾರ್ಗದರ್ಶನ ನೀಡುತ್ತಾ ಎಲ್ಲೂ ಲೋಪ ಕಾಣದಂತೆ ಶ್ರಮಿಸುತ್ತಿರುವವರು.
ನಮಗಿದುವೇ ಬ್ರಹ್ಮಕಲಶ ಸಂಭ್ರಮ!
ಪೊಳಲಿ ದೇಗುಲದಲ್ಲಿ ಬ್ರಹ್ಮಕಲಶ ಆರಂಭವಾದ ಬಳಿಕ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿದ್ದೇನೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಡಚಣೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತಿದ್ದೇವೆ. ಬ್ರಹ್ಮಕಲಶ ಸಂಭ್ರಮ ಕಣ್ತುಂಬಿ ಕೊಳ್ಳಲಾಗುತ್ತಿಲ್ಲ ಎಂಬ ನೋವಿಲ್ಲ, ಪೊಳಲಿ ಅಮ್ಮನ ಈ ಸೇವೆಯಲ್ಲಿಯೇ ಅವರ ಸಂಭ್ರಮ ಕಾಣುತ್ತಿದ್ದೇವೆ ಎನ್ನುತ್ತಾರೆ ಸ್ವಯಂಸೇವಕರು.
ಸ್ವಯಂ ಸೇವಕರಾಗಿ ಕೆಲಸ ಮಾಡಲು ಹೆಸರು ನೋಂದಾವಣೆಗೆ ಸೂಚಿ ಸಿದಾಗ ಬರೋಬ್ಬರಿ 13, 700 ಮಂದಿ ಹೆಸರು ನೋಂದಾ ಯಿಸಿಕೊಂಡಿದ್ದರು. ಅನ್ನಛತ್ರ, ಭೋಜನ ಶಾಲೆ, ಉಗ್ರಾಣ, ಪಾಕಶಾಲೆ, ರಕ್ಷಣಾ ವಿಭಾಗ, ಅತಿಥಿ ಸತ್ಕಾರ, ಸ್ವಚ್ಛತೆ… ಹೀಗೆ ವಿಭಾಗಗಳನ್ನು ಮಾಡಿಕೊಳ್ಳಲಾಗಿದ್ದು, ಸುಮಾರು ೨೪೦ರಷ್ಟು ಗಂಡಸರು, 150ರಷ್ಟು ಹೆಂಗಸರು ಪ್ರತೀ ವಿಭಾಗದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಭಾನುವಾರ ಒಂದೇ ದಿನ ಬರೋಬ್ಬರಿ 8000ಸಾವಿರ ಮಂದಿ ಸ್ವಯಂಸೇವಕರು ಶ್ರೀ ಕ್ಷೇತ್ರದಲ್ಲಿ ದಣಿವರಿಯದೆ ಕರ್ತವ್ಯ ನಿರ್ವಹಿಸಿದ್ದಾರೆ.
ಇದಲ್ಲದೆ 25,000 ಅಧಿಕ ಜನರು ಹೆಸರು ನೋಂದಾಯಿಸದೇ ಸ್ವಯಂ ಸೇವಕರಾಗಿ ಕೆಲಸ ಮಾಡುವವರೂ ಇಲ್ಲಿ ಕಾಣಸಿಗುತ್ತಾರೆ. ಪೊಳಲಿ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ಪ್ರತೀ ಭಕ್ತನೂ ಸ್ವಯಂ ಸೇವಕನಂತೆ ಕಂಡುಬರುತ್ತಿದ್ದಾರೆ. ಇದಲ್ಲದೆ ವಿವಿಧ ಸಂಘಟನೆಗಳೂ ಇಲ್ಲಿ ಸ್ವಯಂಪ್ರೇರಿತರಾಗಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸುಮಾರು 500 ರಷ್ಟು ಯುವಕರು ಇಲ್ಲಿ ಸ್ವಚ್ಛತಾ ವಿಭಾಗದಲ್ಲಿ ಸ್ವಯಂ ಸೇವಕರಾಗಿ ತೊಡಗಿಕೊಂಡಿದ್ದಾರೆ. ಬೆಳಗ್ಗಿನಿಂದ ರಾತ್ರಿ ಹತ್ತು ಗಂಟೆ, ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ ತನಕ… ಹೀಗೆ ಎರಡು ವಿಭಾಗದಲ್ಲಿ ಈ ಯುವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಒಟ್ಟಿನಲ್ಲಿ ಭಕ್ತರು ಪೊಳಲಿ ಕ್ಷೇತ್ರದ ಬ್ರಹ್ಮಕಲಶ ಸಂಭ್ರಮದಲ್ಲಿ ಯಾವುದೇ ಅಡಚಣೆ, ಗೊಂದಲಗಳಿಲ್ಲದೆ ಪಾಲ್ಗೊಳ್ಳುವಂತಾಗಲು ತೆರೆಯ ಮರೆಯಲ್ಲಿ ಈ ಪ್ರಚಾರ ಬಯಸದ ಸಹಸ್ರಾರು ಸ್ವಯಂಸೇವಕ ಪಡೆ ಸದ್ದಿಲ್ಲದೆ ತಮ್ಮ ಕಾಯಕದಲ್ಲಿ ತೊಡಗಿಕೊಂಡಿರುವುದೂ ಒಂದು ಕಾರಣವಾಗಿದೆ.