ಬಂಟ್ವಾಳ : ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ರವಿವಾರ ಬೆಳಿಗ್ಗೆ ಮೀನಲಗ್ನದಲ್ಲಿ ಪ್ರದಾನ ಶ್ರೀದೇವರ ಸಹಿತ ಪರಿವಾರ ದೇವರ ಹಾಗೂ ನೂತನ ಧ್ವಜ ಸ್ತಂಭದ ಪ್ರತಿಷ್ಠಾಪನೆ ಕ್ಷೇತ್ರದ ತಂತ್ರಿವರ್ಯರ ನೇತೃತ್ವದಲ್ಲಿ ವೈಧಿಕ ವಿಧಿವಿಧಾನಗಳೊಂದಿಗೆ ನಡೆಯಿತು.
7.23ರಿಂದ 8.23ರವರೆಗಿನ ಮೀನಲಗ್ನ ಸುಮುಹೂರ್ತದಲ್ಲಿ ಶ್ರೀದುರ್ಗಾಪರಮೇಶ್ವರಿ, ಶ್ರೀರಾಜರಾಜೇಶ್ವರಿ, ಶ್ರೀ ಸುಬ್ರಹ್ಮಣ್ಯ, ಶ್ರೀಗಣಪತಿ, ಶ್ರೀಭದ್ರಕಾಳಿ ದೇವರುಗಳ ಪ್ರತಿಷ್ಠೆ-ಜೀವಕಲಶಾಭಿಷೇಕವನ್ನು ವಿಧಿವತ್ತಾಗಿ ನಡೆಸಲಾಯಿತು. ದೇವಸ್ಥಾನ ನವೀಕರಣಗೊಳ್ಳುವ ಮುನ್ನ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರುಗಳನ್ನು ಇದೀಗ ಮೂಲ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ಬೆಳಿಗ್ಗೆ 10.40 ರ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ, ಕ್ಷೇತ್ರಪಾಲಸಹಿತ ದೈವಗಳ ಪ್ರತಿಷ್ಠೆ, ಅಂಕುರಪೂಜೆ, ಮಹಾಪೂಜೆ ನಡೆಯಿತು. ದೇವರ ಗರ್ಭಗುಡಿಯ ಮುಗುಳಿ ಏರಿಸುವ ಕ್ರಮವನ್ನು ವಿಧಿವತ್ತಾಗಿ ನಡೆಸಲಾಯಿತು. ಧ್ವಜಸ್ತಂಭ ಪ್ರತಿಷ್ಠೆ: ಬಿಲ್ಲವ ಸಮಾಜಬಾಂಧವರು ಸೇವಾರೂಪದಲ್ಲಿ ಸಮರ್ಪಿಸಿದ ನೂತನ ಧ್ವಜಸ್ಥಂಭದ ಪ್ರತಿಷ್ಠಾಪನೆಯ ನೆರವೇರಿದ್ದು, ಚಿನ್ನದ ಲೇಪಿತ ನವಿಲಿನ ಮೂರ್ತಿಯನ್ನು ಕೊಡಿಮರದ ತುದಿಯಲ್ಲಿ ಪ್ರತಿಷ್ಠಾಪಿಸಿ ನವಿಲು ಧ್ವಜ ಏರಿಸಲಾಯಿತು.
ಹಾರಾಡಿದ ಮೂರು ಗಿಡುಗಗಳು:
ಪೊಳಲಿಯಲ್ಲಿ ನೂತನ ಧ್ವಜಸ್ತಂಭಕ್ಕೆ ಚಿನ್ನದ ನವಿಲಿನ ಮೂರ್ತಿಯನ್ನು ಪ್ರತಿಷ್ಠಾಪಿಸುವ ವೇಳೆ ಮೂರು ಗಿಡುಗಗಳು ಧ್ವಜಸ್ತಂಭದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದ ದೃಶ್ಯ ನೆರೆದ ಭಕ್ತರಲ್ಲಿ ಅಚ್ಚರಿಯನ್ನು ಮೂಡಿಸಿತು. ನಿರೀಕ್ಷೆಗೂ ಮೀರಿ ಜನ ಸೇರಿದ್ದು,ಯಾವುದೇ ರೀತಿಯ ಅಡಚಣೆ ,ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು.