ಬಂಟ್ವಾಳ: ” ಕಣ್ಣುಗಳೆರಡು ಸಾಲದಮ್ಮ ಪೊಳಲಿಯ ಬ್ರಹ್ಮಕಲಶೋತ್ಸವದ ವೈಭವವ ನೋಡಲಮ್ಮ”.. ಈ ಹಾಡು ವಸ್ತುಶ: ತುಳುನಾಡಿನ ಮಣ್ಣಿನ ಅತ್ಯಂತ ಪುನೀತವಾದ ಪಾವನಭೂಮಿ ಪೊಳಲಿ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ವೈಭವವನ್ನು ಸಾರಿಹೇಳುತ್ತಿದೆ.
ದಾರ್ಮಿಕ ಭಾವಗಳು ಜಾಗೃತಿಗೊಂಡ ಭಕ್ತ ಸಮೂಹ ದೇವಾಲಯದ ಪ್ರಾಂಗಣ.. ಸಾಕ್ಷತ್ ಸ್ವರ್ಗವೇ ಧರೆಗವತರಿಸಿದ ವಾತವರಣವೇ ಇಲ್ಲಿ ಸೃಷ್ಟಿಯಾಗಿದೆ.. ಒಂದೆಡೆ ವಿಶಾಲವಾದ ದಾರ್ಮಿಕ ಸಭಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭೆಯ ಮೂಲಕ ಸಂತರಿಂದ ಸಂದೇಶ, ದೇವಸ್ಥಾನದ ಮುಂಭಾಗ ಕಿರು ವೇದಿಕೆಯಲ್ಲಿ ನಿರಂತರ ವಿವಿಧ ತಂಡಗಳ ಭಜನೆ ಮನಸ್ಸಿಗೆ ಮುದ ನೀಡುತ್ತಿದೆ.

ಭಕ್ತ ಸಮೂಹಕ್ಕೆ ನಿರಂತರ ಅನ್ನಪ್ರಸಾದ: ಶ್ರೀ ರಾಜರಾಜೇಶ್ವರಿಯ ಅನ್ನಪ್ರಸಾದ, ಉಪಹಾರ, ಉಗ್ರಾಣಗಳಲ್ಲಿ ಭಕ್ತಿಯಿಂದ ಸಮರ್ಪಿಸಿದ ಹೊರೆಕಾಣಿಕೆಗಳು. ಆದರದಿಂದ ಸತ್ಕರಿಸುವ ಸ್ವಯಂ ಸೇವಕರು ನಿಷ್ಟೆಯಿಂದ ದೇವರ ಕಾರ್ಯವೆಂದು ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ದೇವರ ಧಾರ್ಮಿಕ ಕಾರ್ಯಗಳಲ್ಲಿ ನಿರತರಾದ ಅರ್ಚಕರು, ಪಾಕಶಾಲೆಯಲ್ಲಿ ನಿತ್ಯ ಅನ್ನಸಂತರ್ಪಣೆ, ಉಪಹಾರ ತಯಾರಿಯ ಕಾರ್ಯದಲ್ಲಿ ಬಾಣಸಿಗರು ನಿರತರಾಗಿದ್ದಾರೆ.
ದೇವಾಲಯ ಸುತ್ತ ಕಣ್ಣು ಹಾಯಿಸಿದರೆ ಮರದ ಕೆತ್ತನೆಯ ಕಾರ್ಯಗಳು ಭಕ್ತಿಯ ಬಾವವನ್ನು ಉದ್ದೀಪನಗೊಳಿಸುತ್ತಿದೆ. ದೇವರ ದ್ವಜಸ್ತಂಭ ಗರ್ಭಗುಡಿಯ ರಜತ ದ್ವಾರಗಳ ಕಲಾತ್ಮಕ ಕಾರ್ಯಗಳು ಭಕ್ತಿಯ ಸುದೆಯನ್ನೇ ಪಸರಿಸುತ್ತಿದೆ
ಸ್ವಯಂ ಸೇವಕನಾಗಿ ನೊಂದಾಯಿತಗೊಂಡವರಿಗೆ ಸಂದೇಶಗಳು ಮಾಹಿತಿಕೇಂದ್ರಗಳ ಸೂಕ್ತ ಸ್ಪಂದನೆ ಸ್ವಚ್ಚತೆಗೆ ವಿಶೇಷ ಆದ್ಯತೆ, ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ಮಾಹಿತಿ ವಿನಿಮಯ, ಚಿತ್ತಾಕರ್ಷಕ ವಿದ್ಯುತ್ ದೀಪಗಳು, ಸೀರೆ ಅಲಂಕಾರಗಳಿಂದ ದೇವಾಲಯ ಕಂಗೊಳಿಸುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ.
ಬಿರು ಬಿಸಿಲಿನಲ್ಲು ವಾಹನ ಪಾರ್ಕಿಂಗ್ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಕರ ಪರಿಶ್ರಮ ಸಾರ್ವತ್ರಿಕ ಶ್ಲಾಘನೆಗೊಳಗಾಗಿದೆ.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ತಮ್ಮ ಪ್ರವಾಸ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಖುದ್ದು ಬ್ರಹ್ಮಕಲಶೋತ್ಸವದ ವ್ಯವಸ್ಥೆಯಲ್ಲಿ ನಿರತರಾಗಿದ್ದಲ್ಲದೆ, ಸ್ವಯಂ ಸೇವಕರ ಜೊತೆಗೂಡಿ ಭಕ್ತರಿಗೆ ಅನ್ನ ಪ್ರಸಾದ ಬಡಿಸುವ ಮೂಲಕ ಗಮನಸೆಳೆದಿದ್ದಾರೆ.

ಪರಿಸರದ ಮುಸ್ಲಿಂ ಬಂದುಗಳು ಶುಭ ಹಾರೈಸಿ ಬ್ಯಾನರ್ ಗಳನ್ನು ಅಳವಡಿಸಿದ್ದು, ಕ್ರಿಶ್ಚಿಯನ್ ಬಂದುಗಳು ಹೊರೆಕಾಣಿಕೆ ಸಮರ್ಪಿಸುವ ಮೂಲಕ ಬ್ರಹ್ಮಕಲಶದಲ್ಲಿ ಸಾಮರಸ್ಯವನ್ನು ಮೇಳೈಸಿದೆ.
ಶುಚಿತ್ವಕ್ಕೆ ಇಲ್ಲಿ ಮೊದಲ ಆದ್ಯತೆ: ಉಗ್ರಾಣ, ಪಾಕಶಾಲೆ , ದೇವಳದ ಸುತ್ತಮುತ್ತ ಕಸ, ತ್ಯಾಜ್ಯ ವಿಲೇವಾರಿಗೆ ಸ್ವಯಂಸೇವಕರ ತಂಡ ತಕ್ಷಣ ಸಿದ್ದವಾಗುತ್ತಾರೆ. ಊಟದ ಬಳಿಕ ಎಲೆಯನ್ನು ವಿಲೇವಾರಿಗಳಿಸಲು ಶುಚಿತ್ವದ ಸ್ವಯಂಸೇವಕರು ಉಪಕ್ರಮಿಸುತ್ತಾರೆ. ಮಹಿಳೆಯರ ಸಹಿತ ಸ್ವಯಂಪ್ರೇರಕರಾಗಿ ದುಡಿಯುವ ಸ್ವಯಂಸೇವಕ ತಂಡವೇ ಪೊಳಲಿಯಲ್ಲಿದೆ. ಸ್ವಯಂಸೇವಕರ ನಿರ್ವಹಣೆ, ಮಾರ್ಗದರ್ಶನ ನೀಡಲು ಕಾಲ್ ಸೆಂಟರನ್ನು ತೆರೆಯಲಾಗಿದೆ. ಇಲ್ಲಿ ಸ್ವಯಂಸೇವಕರು ಶಿಫ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇನ್ನೊಂದು ವಿಶೇಷ. ಮೇಲು, ಕೀಳು ಎನ್ನದೇ ಪೊಳಲಿ ಅಮ್ಮನ ಪ್ರೀತ್ಯರ್ಥವಾಗಿ ಸೇವೆಯಲ್ಲಿ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಾರೆ.


ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಕಿಕ್ಕಿರಿದು ತುಂಬಿದ್ದು ಅದರಲ್ಲು ವಿಶೇಷವಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಭಾಗವಹಿಸಿದ್ದ ಭಕ್ತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಕುಳಿತುಕೊಂಡು ಹಾಗೂ ಬಫೆ ವ್ಯವಸ್ಥೆಯಲ್ಲಿ ಅನ್ನಪ್ರಸಾದದ ವ್ಯವಸ್ಥೆ ಇದ್ದ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗುತ್ತಿಲ್ಲ.
ಲಕ್ಷಕ್ಕೂ ಅಧಿಕ ಭಕ್ತರು
ಮಾ.4ರಿಂದ ಶುಕ್ರವಾರದವರೆಗೆ 2 ಲಕ್ಷಕ್ಕೂ ಅಧಿಕ ಭಕ್ತರು ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಮಾ. 10ರಂದು ಹಾಗೂ 13ರಂದು ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಅದಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಜತೆಗೆ ಅಂದು ಊಟದ ಮೆನುವಿನಲ್ಲೂ ಬದಲಾವಣೆ ಇರುತ್ತದೆ ಎಂದು ಪಾಕಶಾಲೆಯ ಉಸ್ತುವಾರಿಗಳು ತಿಳಿಸಿದ್ದಾರೆ.