ಕಾಣದಿರುವ ಕನಸಿಗೆಲ್ಲ
ಬಣ್ಣ ಬಳಿದು ಓಡಿದೆ
ಬಾರದಿರುವ ಮಳೆಗೆ ಮೋಡ
ಕಟ್ಟಿ ಏಕೆ ಕಾಡಿದೆ

ಜೇನು ಇರದ ಗೂಡು ಕಟ್ಟಿ
ಹಾರಿಹೋದೆ ಹೇಳದೆ
ಬೆಟ್ಟದಷ್ಟು ಪ್ರೀತಿ ಇಟ್ಟು
ಸುಟ್ಟು ನಡೆದೆ ಕೇಳದೆ
ಬಾನ ಎದೆಗೆ ಬೆಳ್ಳಿ ಮಿಂಚು
ಬೆಳಕನೆಂದು ನೀಡದು
ಗುಳ್ಳೆ ನರಿಗೆ ಒಲವ ಗಾನ
ಮನದಲೆಂದು ಮೂಡದು
ಅಲೆಯು ದಡವನಪ್ಪಿ ಕಡಲ
ಒಡಲಿನಲ್ಲೆ ಸರಿವುದು
ದೂರ ಸರಿವ ನನ್ನ ಮನವು
ಮತ್ತೆ ನಿನ್ನ ನೆನೆವುದು
ಒಲವು ಎಂಬ ಹೆಸರನಿಟ್ಟು
ಕೊಲುವುದೇನು ಚೆಂದವು
ಸಾಯದಿರುವ ಸವಿಯನಿಟ್ಟು
ಎಲ್ಲ ಜೀವ ತಿಂದವು
ಸಾಯದೇನೆ ಉಳಿಯದೇನೆ
ಬಳಲುತಿರುವೆ ದಿನ ದಿನ
ಎಂದು ನಿನ್ನ ಮರೆವೆ ನಾನು
ಅಂದೆ ನನ್ನ ಕೊನೆ ದಿನ
✍️ನೀ.ಶ್ರೀಶೈಲ ಹುಲ್ಲೂರು


