ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಪಣಕಜೆ ಪೊಮ್ಮಾಜೆ ರಸ್ತೆ ಈ ಮಳೆಗಾಲದಲ್ಲಿ ಮತ್ತೆ ಸುದ್ದಿಯಲ್ಲಿದೆ. ಕಾರಣ ಕೆಲವು ತಿಂಗಳ ಹಿಂದೆ ಈ ರಸ್ತೆಯ ಅವ್ಯವಸ್ಥೆಯ ಬಗೆಗಿನ ದೂರುಗಳು ಪತ್ರಿಕಾ ಮಾಧ್ಯಮಗಳಲ್ಲಿ ಬಂದಿತ್ತು.

ಚರಂಡಿ ವ್ಯವಸ್ಥೆಯಿಲ್ಲದೆ, ದಾರಿ ದೀಪದ ವ್ಯವಸ್ಥೆಯಿಲ್ಲದ ಕೆಸರು ತುಂಬಿದ ರಸ್ತೆಯಾಗಿತ್ತು ಪೊಮ್ಮಾಜೆ ಪಣಕಜೆ ರಸ್ತೆ.
ಬಡ ಕೃಷಿ ಕೂಲಿ ಕಾರ್ಮಿಕರೇ ಈ ರಸ್ತೆಯ ಫಲಾನುಭವಿ ನಾಗರಿಕರು. ಈ ರಸ್ತೆ ಕೆಲವು ತಿಂಗಳ ಹಿಂದೆ ಸಮರ್ಪಕ ಚರಂಡಿಗೆ ವ್ಯವಸ್ಥೆಯಿಲ್ಲದೆ ನೀರು ಕೆಸರು ಕಸಕಡ್ಡಿಗಳು ಸಂಪೂರ್ಣ ರಸ್ತೆಯಲ್ಲೇ ಹರಿದು, ಈ ರಸ್ತೆಯಲ್ಲಿ ಪಾದಚಾರಿಗಳು ಹಾಗು ವಾಹನ ಸವಾರರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಿರಿಯ ನಾಗರಿಕರು ಹರಸಾಹಸಪಟ್ಟು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಎಷ್ಟೋ ಬಾರಿ ಈ ಕೆಸರು ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದ ಉದಾಹರಣೆಗಳಿವೆ.
ಈ ರಸ್ತೆ ಅವ್ಯವಸ್ಥೆಯ ಬಗ್ಗೆ ಪತ್ರಿಕಾ ಮಾಧ್ಯಮಗಳಲ್ಲಿ ವರದಿ ಬಂದ ತಕ್ಷಣ ಮಾಲಾಡಿ ಪಂಚಾಯತ್ ಆಡಳಿತವು ಪೂರಕವಾಗಿ ಸ್ಪಂದಿಸಿದೆ. ಪಂಚಾಯತ್ ಆಡಳಿತದವರಿಗೆ ಅಭಿನಂದನೆಗಳು ಕೂಡ.
ಈಗ ವಿಷಯವೇನೆಂದರೆ,ಈ ರಸ್ತೆಗೆ ಪಂಚಾಯತ್ ಅನುದಾನದ ಕಾಮಗಾರಿ ಕೂಡಾ ನಡೆದಿದೆ. ಆದರೆ ಅದು ಅದು ಅಸಮರ್ಪಕ ಕಾಮಗಾರಿಯಾಗಿದೆ ಎಂದು ಈ ರಸ್ತೆ ಫಲಾನುಭವಿ ನಾಗರಿಕರ ದೂರು. ಕಾರಣ, ರಸ್ತೆ ಕಾಣದಂತೆ ಕುರುಚಲು ಗಿಡಗಳು ಪೊದೆಗಳಿಂದ ತುಂಬಿದ್ದ ಈ ರಸ್ತೆಯಲ್ಲಿ ಅರ್ದಮ್ ಬರ್ದ ಕಾಮಗಾರಿ ನಡೆದಿದೆ. ಕೆಲವು ಕಡೆ ಮಾತ್ರ ಚರಂಡಿ ಸರಿಪಡಿಸಲಾಗಿದೆ. ಕೆಲವು ಕಡೆ ಪೊದೆಗಳನ್ನು ಹಾಗೆಯೆ ಬಿಡಲಾಗಿದೆ.
ಅದೇ ರೀತಿ ದಾರಿದೀಪ ಹಾಕಿಲ್ಲ ರಾತ್ರಿ ಸಮಯದಲ್ಲಿ ನಾಗರಿಕರಿಗೆ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಗಾಯದ ಮೇಲೆ ಬರೆ ಎಳೆದಂತೆ ಇಲ್ಲಿನ ನಾಗರಿಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮೊದಲೇ ಕೆಸರಿನಿಂದ ತುಂಬಿದ ಈ ರಸ್ತೆಗೆ ಈಗ ಪಂಚಾಯತ್ ಮೂಲಕ ಕೆಸರು ತೆಗೆಯದೆ ಕೆಸರಿನ ಮೇಲೆಯೇ ಕೋರೆಯ ದೂಳು ಹುಡಿಯನ್ನು ಹಾಕಿ ಈಗ ಈ ರಸ್ತೆ ಸಂಪೂರ್ಣ ಸಂಚಾರ ಅಯೋಗ್ಯವಾಗಿ ಕಂಬಳದ ಟ್ರಾಕ್ ಗಳಂತಾಗಿದೆ. ಮೊದಲೇ ಕೆಸರಡೊಂಜಿ ಕೂಟ ಗದ್ದೆಯಂತಿದ್ದ ಈ ರಸ್ತೆ ಈಗ ನಾಗರಿಕರಿಗೆ ನಡೆದಾಡಲು ಅಯೋಗ್ಯವಾಗಿದೆ.
ಆದ್ದರಿಂದ ಮಾಲಾಡಿ ಪಂಚಾಯತ್ ಆಡಳಿತವು ಈ ರಸ್ತೆಯ ಸಮಸ್ಯೆಯನ್ನು ದಾರಿದೀಪದ ಸಮಸ್ಯೆಯನ್ನು ಆದಷ್ಟು ಬೇಗ ಸರಿಪಡಿಸಿಕೊಡಬೇಕೆಂದು ಊರ ಸಮಸ್ತ ನಾಗರಿಕರ ಪರವಾಗಿ ಬೇಡಿಕೊಳ್ಳುತ್ತೇವೆ.
– ಊರ ಸಮಸ್ತ ನಾಗರಿಕರ ಪರವಾಗಿ
ರಿಯಾಜ್ ಮದ್ದಡ್ಕ