ಬಂಟ್ವಾಳ: ಸೂರಿಕುಮೇರುನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಪಪ್ಪಾಯಿ, ದೂರದ ಸಂಪಾಜೆಯಲ್ಲೂ ಮೋಡಿ ಮಾಡಿದೆ ಎಂದರೆ ನೀವು ನಂಬುತ್ತೀರಾ.. ಹೌದು.. ನೀವು ನಂಬಲೇಬೇಕು.
ಸಂಪಾಜೆಯ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನಲ್ಲೂ ಇದೀಗ ಬೆಳೆದು ನಿಂತಿರುವ ಪಪ್ಪಾಯಿ ಕೃಷಿ ಎಲ್ಲರ ಮನಸೂರೆಗೊಳ್ಳುತ್ತಿದೆ. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸೂರಿಕುಮೇರು ಬೊರಿಮಾರ್ ಚರ್ಚ್ ಗೆ ಬಂದಿದ್ದ ಸಂಪಾಜೆ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋ ರವರು, ಸೂರಿಕುಮೇರು ಚರ್ಚ್ ನ ಧರ್ಮಗುರುಗಳಾಗಿರುವ ವಂದನೀಯ ಫಾದರ್ ಗ್ರೆಗರಿ ಪಿರೇರಾ ರ ಕೃಷಿಕ್ರಾಂತಿ ಕಂಡು ಚಕಿತರಾಗಿದ್ದರು.


ಅದಾಗಲೇ ಪಪ್ಪಾಯಿ ಬೆಳೆಯ ಮೂಲಕ ಪಪ್ಪಾಯಿ ಫಾದರ್ ಎಂದೇ ಹೆಸರು ಮಾಡಿದ್ದ ಫಾದರ್ ಗ್ರೆಗರಿ ಪಿರೇರಾ ರವರ ಮುತುವರ್ಜಿಯಲ್ಲಿ ಬೆಳೆಸಿದ್ದ ಸುವರ್ಣ ಗೆಡ್ಡೆ, ನುಗ್ಗೆ, ಬಸಳೆ, ಅರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸಿನ ಬಳ್ಳಿಗೆ ಮಾರುಹೋದರು. ಸಂಪಾಜೆ ಚರ್ಚ್ ನಲ್ಲೂ ಕೃಷಿಕ್ರಾಂತಿಯ ಸಂಕಲ್ಪ ತೊಟ್ಟರು. ಅವರು ಅಂದು ಸೂರಿಕುಮೇರು ಚರ್ಚ್ ನಿಂದ ಕೊಂಡೊಯ್ದ ಪಪ್ಪಾಯಿ ಗಿಡಗಳು, ಬಸಳೆ ಬಳ್ಳಿ,ಅಲಸಂಡೆ , ಅರಿವೆ ಸೊಪ್ಪು ಇದೀಗ ತೋಟವಾಗಿ ಸಂಪಾಜೆ ಚರ್ಚ್ ಜಮೀನಿನಲ್ಲಿ ರಾರಾಜಿಸುತ್ತಿದೆ. *ಸಂಪಾಜೆಯಲ್ಲಿರುವ ಸುಮಾರು 85ಕ್ಕೂ ಅಧಿಕ ಸಂಖ್ಯೆಯ ಪಪ್ಪಾಯಿ ಗಿಡಗಳು ಸೂರಿಕುಮೇರು ಚರ್ಚ್ ನ ಪಪ್ಪಾಯಿಗಳನ್ನೇ ಹೋಲುತ್ತಿವೆ. ಎಷ್ಟಂದರೂ ಮೂಲ ಸೂರಿಕುಮೇರಿನದ್ದು ತಾನೇ..* ಸೂರಿಕುಮೇರು ಚರ್ಚ್ ಆವರಣದ ಕೃಷಿ ಕ್ರಾಂತಿ ಅದೆಷ್ಟೋ ಮನೆಮನಗಳಲ್ಲಿ ಕೃಷಿ ಕಾರ್ಯಕ್ಕೆ ಪ್ರೇರಣೆಯಾಗಿದೆ. ಹಲವು ಚರ್ಚುಗಳಲ್ಲಿ ಕೃಷಿ ಕಾಯಕದ ಚಟುವಟಿಕೆಗೆ ಚಾಲನೆ ದೊರೆತಿದೆ. ಸಂಪಾಜೆ ಚರ್ಚ್ ಇದಕ್ಕೊಂದು ನಿದರ್ಶನವಷ್ಟೇ. ತಮಗೆ ಪ್ರೇರಣೆಯಾದ ಸೂರಿಕುಮೇರು ಚರ್ಚಿನ ಧರ್ಮಗುರುಗಳಿಗೆ ಸಂಪಾಜೆ ಚರ್ಚಿನ ಧರ್ಮಗುರುಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಕ್ರೈಸ್ತ ಪ್ರಜೆಗಳೂ ಅಭಿನಂದನೆಗಳನ್ನು ನೀಡಿ ಸಂಭ್ರಮಿಸಿದ್ದಾರೆ.
ಏನೇ ಇರಲಿ, ಒಂದು ಚರ್ಚ್ ಅನ್ನು ಕೃಷಿಕಾಯಕದ ಮೂಲಕವೂ ಮಾದರಿ ಮಾಡಿ ತೋರಿಸಬಹುದು ಎನ್ನುವುದನ್ನು ಸೂರಿಕುಮೇರುವಿನ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು ವಂದನೀಯ ಫಾದರ್ ಗ್ರೆಗರಿ ಪಿರೇರಾ ತೋರಿಸಿಕೊಟ್ಟಿದ್ದಾರೆ. ಅಭಿನಂದನೆಗಳು..

