ಬಂಟ್ವಾಳ : ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಪಲ್ಲಮಜಲು ಸಮೀಪದ ಕುವಡ್ಕ ಎಂಬಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದು,ಆರೋಪಿಗಳ ಬಗ್ಗೆ ಪ್ರಕರಣ ದಾಖಲಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು ಹಿರಿಯ ಭೂವಿಜ್ಞಾನಿಯವರ ಕಚೇರಿಯ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಸಂದೀಪ್ ಜಿ.ಯು.ಅವರು ಬಿ.ಮೂಡ ಗ್ರಾಮದ ಕುವಡ್ಕ ನಿವಾಸಿಗಳಾದ ಜೋಸೆಫ್ ಡಿ.ಕುನ್ಹ ಹಾಗೂ ಮರ್ವಿನ್ ಗೋವಿಯಸ್ ಅವರ ವಿರುದ್ದ ದೂರು ನೀಡಿದ್ದಾರೆ.
ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ನಡೆಯುತ್ತಿರುವ ಕಪ್ಪ ಕಲ್ಲು ಗಣಿಗಾರಿಕೆ ವಿರುದ್ದ ಗ್ರಾಮಸ್ಥರು ಆಕ್ರಮ ಎಂದು ಆರೋಪಿಸಿ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿ ಹಾಗೂ ಗಣಿ ಇಲಾಖೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಗಳು ತನಿಖೆ ನಡೆಸಿದಾಗ ಇವರ ಅಕ್ರಮ ಬಯಲಾಗಿದೆ. ಅನುಮತಿ ಪಡೆದ ಸ್ಥಳದಲ್ಲಿ ಹೊರತುಪಡಿಸಿ,ಇತರೆ ಜಾಗದಲ್ಲಿ ಅತಿಕ್ರಮಿಸಿ ಕಲ್ಲು ಗಣಿಗಾರಿಕೆ ನಡೆಸಿದ ಬಗ್ಗೆ ಕಂಡು ಬಂದಿದ್ದು, ಇದೀಗ ಗಣಿಗಾರಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ನಗರ ಪೋಲೀಸರಿಗೆ ದೂರು ನೀಡಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ಸ್ಥಳೀಯ ಅನೇಕ ಮನೆಗಳ ಗೋಡೆಗಳಿಗೆ ಹಾನಿಯಾಗಿದೆ ಎಂದು ಆರೋಪಿಸಿದ್ದಲ್ಲದೆ, ಘನ ಗಾತ್ರದ ವಾಹನಗಳ ಬೇಜವಾಬ್ದಾರಿತನದ ಸಂಚಾರ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ಆರೋಪಿಸಿದ್ದರು, ಅಲ್ಲದೆ ನ್ಯಾಯ ಒದಗಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು.
ಇದೀಗ ಅತಿಕ್ರಮಣ ಮಾಡಿ ಅಕ್ರಮ ಗಣಿಗಾರಿಕೆ ಮಾಡಿದ ಆರೋಪದ ಮೇಲೆ ಮಾಲಕರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಠಾಣಾ ಪೋಲೀಸರು ಮಾಹಿತಿ ನೀಡಿದ್ದಾರೆ.

