ಬಂಟ್ವಾಳ; ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಅವರು ಭೇಟಿ ನೀಡಿ ಆಶ್ರೀರ್ವಾದ ಪಡೆದಿದ್ದಾರೆ.


ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದ ಪದ್ಮರಾಜ್ ಆರ್ ಅವರನ್ನು ಪಕ್ಷ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿ ಬಳಿಕ ನೇರವಾಗಿ ಹಿರಿಯ ಕಾಂಗ್ರೆಸ್ ನಾಯಕ ಗುರುಸಮಾನರಾದ ಜನಾರ್ದನ ಪೂಜಾರಿ ಅವರ ಮನೆಗೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಜನಾರ್ದನ ಪೂಜಾರಿ ಅವರು ಮಾತನಾಡಿ, ದೇವರ ಸಂಪೂರ್ಣ ಆಶ್ರೀರ್ವಾದ ಅಭ್ಯರ್ಥಿಯ ಮೇಲೆ ಇದ್ದು, ವಿಜಯದ ಪತಾಕೆಯನ್ನು ಹಾರಿಸಲು ಕಾರ್ಯಕರ್ತರು ರಾತ್ರಿ ಹಗಲು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬಡವರ ಸೇವೆ ಮಾಡಬೇಕು ಎಂದು ತಿಳಿಸಿದರು.
ಅಭ್ಯರ್ಥಿ ಪದ್ಮರಾಜ್ ಆರ್ ಅವರು ಮಾತನಾಡಿ, ರಾಜಕೀಯ ವ್ಯವಸ್ಥೆಯ ಒಳಗೆ ಬರಬೇಕಿದ್ದರೆ ಪೂಜಾರಿ ಅವರ ಆಶ್ರೀರ್ವಾದದಿಂದ ಸಾಧ್ಯವಾಗಿದೆ.
ಇದೀಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿದ್ದು, ಈ ಸಂದರ್ಭದಲ್ಲಿ ಪೂಜಾರಿ ಅವರ ಆಶ್ರೀರ್ವಾದ ಪಡೆಯಲು ಬಂದಿದ್ದೇನೆ.
ಪೂಜಾರಿ ಅವರು ಹಾಕಿಕೊಟ್ಟ ಹಾದಿಯಲ್ಲಿ ಪಾರದರ್ಶಕತೆಯ ರಾಜಕೀಯ ಮಾಡುತ್ತೇನೆ, ಪೂಜಾರಿ ಅವರ ಕನಸಿನ ಅನೇಕ ಕಾರ್ಯಗಳಿಗೆ ಬಲತುಂಬುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಮಾಣಿ, ಪ್ರಮುಖರಾದ ಸುನಿಲ್ ಬಜಲಕೇರಿ, ಅಪ್ಪಿ , ದೀಪಕ್ ಪೆರ್ಬುದೆ, ದೀಪಕ್ ಪಿಳಾರ್, ಮಧುಸೂದನ್ ಶೆಣೈ, ದಿನೇಶ್ ಶೆಟ್ಟಿ ,ಸುರೇಶ್ ಜೋರಾ, ನಿತಿನ್ ಬೆಳುವಾಯಿ, ಪ್ರವೀಣ್ ಪರಂಗಿಪೇಟೆ ಮತ್ತಿತರ ಪ್ರಮುಖರು ಹಾಜರಿದ್ದರು