ವಿಟ್ಲ: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ವಿಟ್ಲ ಸಮೀಪದ ಒಕ್ಕೆತ್ತೂರು ಹೊಳೆಯಲ್ಲಿ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಹೋರಿಯನ್ನು ಸ್ಥಳೀಯ ಸಾಹಸಿಗ ಯುವಕರು ಸೇರಿ ರಕ್ಷಣೆ ಮಾಡಿದ್ದಾರೆ. ಹೋರಿ ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದೆ.
ಶುಕ್ರವಾರ ಮಧ್ಯಾಹ್ನ ವೇಳೆಗೆ ಒಕ್ಕೆತ್ತೂರು ಕೆಳಗಡೆ ಹೊಳೆಯಲ್ಲಿ ತೇಲಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಇತರರಿಗೆ ಮಾಹಿತಿ ನೀಡಿದ್ದಾರೆ. ಹೋರಿ ಒಕ್ಕೆತ್ತೂರು ಸುರುಂಬಡ್ಕ ಕಿಂಡಿ ಅಣೆಕಟ್ಟು ಸಮೀಪಿಸುತ್ತಿದ್ದಂತೆ ಒಕ್ಕೆತ್ತೂರಿನ ಯುವಕರು ಹಗ್ಗ ಹಿಡಿದು ಹೊಳೆ ಬದಿಯಲ್ಲಿ ಹಿಡಿಯಲು ಮುಂದಾದರು. ಆದರೂ ಸಾಧ್ಯವಾಗಿಲ್ಲ. ಬಳಿಕ ಒಕ್ಕೆತ್ತೂರಿನ ಇಬ್ಬರು ಸಾಹಸಿಗ ಯುವಕರು ನೇರವಾಗಿ ಹೊಳೆಗೆ ಹಾರಿ ರಕ್ಷಣೆ ಮಾಡಿದ್ದಾರೆ. ಈ ಹೋರಿ ಯಾರದ್ದು ಎಂಬುದು ತಿಳಿದಿಲ್ಲ. ಇದೀಗ ಮಂಜಲಾಡಿ ಲಕ್ಷ್ಮಣ್ ಗೌಡ ಅವರ ಮನೆಯಲ್ಲಿ ಹೋರಿಯನ್ನು ಕಟ್ಟಿ ರಕ್ಷಿಸಲಾಗಿದೆ.














