–ರಾಜಾ ಬಂಟ್ವಾಳ

ಬಂಟ್ವಾಳ : ಮಲ್ಲಿಗೆ ಗಿಡ ಬೆಳೆದು ಹೂವಿನ ಮಾರಾಟದ ಆದಾಯದಲ್ಲಿ ಜೀವನ ಸಾಗಿಸುವುದನ್ನು ಕೇಳಿದ್ದೇವೆ. ಬಂಟ್ವಾಳ ತಾಲೂಕು ಕುಳ ಗ್ರಾಮದ ಸರಕಾರಿ ಹಿ.ಪ್ರಾ.ಶಾಲೆ ಓಜಲ ಶಾಲಾಭಿವೃದ್ದಿ ಸಮಿತಿ ಮಲ್ಲಿಗೆ ಹೂ ಮಾರಾಟದಿಂದ ಶಾಲೆಯನ್ನು ಮಾದರಿಯಾಗಿ ನಡೆಸುತ್ತಿದೆ ಎಂಬುದು ಅಷ್ಟೇ ಸತ್ಯ. ರಾಜ್ಯದಲ್ಲಿ ಇಂತಹ ಪ್ರಯತ್ನ ನಡೆಸಿದ ಏಕೈಕ ಶಾಲೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯೂ ಒಪ್ಪುತ್ತದೆ.
ಮೂವರು ಗೌರವ ಶಿಕ್ಷಕಿಯರಿಗೆ ಸಂಬಳವನ್ನು ಇದೇ ಆದಾಯದಲ್ಲಿ ನೀಡುತ್ತಿರುವುದಾಗಿ ಸ್ವತ: ಶಾಲಾ ಮುಖ್ಯಶಿಕ್ಷಕಿ ಹಾಗೂ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ ಕೇವಲ 7 ವಿದ್ಯಾರ್ಥಿಗಳಿದ್ದ ಶಾಲೆಯನ್ನು ಶಾಲಾಭಿವೃದ್ದಿ ಸಮಿತಿಯು ಗೌರವ ಶಿಕ್ಷಕಿಯರ ನೇಮಕದ ಮೂಲಕ ಗುಣಮಟ್ಟದ ಕನ್ನಡ ಮಾದ್ಯಮ ಶಿಕ್ಷಣವನ್ನು ನೀಡಿದ್ದಲ್ಲದೆ ಹೆಚ್ಚಿನ ಮಕ್ಕಳ ಸೇರ್ಪಡೆ ಸಾಧನೆ ಮಾಡಿದೆ.
ಕನ್ನಡ ಮಾದ್ಯಮ:
ಆಂಗ್ಲ ಭಾಷೆಯ ಶಿಕ್ಷಣ ನೀಡಿದರೆ ಮಾತ್ರ ಮಕ್ಕಳ ಸಂಖ್ಯೆ ಹೆಚ್ಚಿಸಲು ಸಾಧ್ಯ ಎನ್ನುವುದಕ್ಕೆ ಅಪವಾದವೋ ಎಂಬಂತೆ ಕನ್ನಡ ಮಾದ್ಯಮದ ಮೂಲಕವೇ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಯಶಸ್ವಿ ಆಗಿರುವುದರ ಹಿಂದೆ ಶಾಲಾಭಿವೃದ್ದಿ ಸಮಿತಿ, ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸರಕಾರದ ಸೂಚನೆ, ನಿಯಮಗಳ ಸಮರ್ಪಕ ಪಾಲನೆ, ಗ್ರಾಮಾಂತರ ಪ್ರದೇಶದಲ್ಲಿದ್ದೂ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಸರ್ವಾಂಗೀಣ ಶೈಕ್ಷಣಿಕ ಸಾಧನೆಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
ಕೃಷಿ ಕಾರ್ಮಿಕ ಅಧ್ಯಕ್ಷರು:
ಶಾಲಾಭಿವೃದ್ದಿ ಸಮಿತಿ ಹಾಲಿ ಅಧ್ಯಕ್ಷ ಹೊನ್ನಪ್ಪ ಗೌಡರು ಕೃಷಿ ಕಾರ್ಮಿಕ. ಸ್ವತ: ಗಿಡಕ್ಕೆ ನೀರು, ಗೊಬ್ಬರ ನೀಡುವ ಮೂಲಕ ಮನೆಯ ಕೃಷಿಯಂತೆ ಮಲ್ಲಿಗೆ ಬೆಳೆಸಿದರು. ಮಲ್ಲಿಗೆ ಹೂವನ್ನು ಪುತ್ತೂರು ಕಬಕದಲ್ಲಿ ಮಾರಾಟಕ್ಕೆ ನೀಡಿ ವಾರ್ಷಿಕ ಸರಾಸರಿ ೬೦ರಿಂದ ೭೦ ಸಾವಿರ ರೂ. ಆದಾಯ ಪಡೆಯುತ್ತಾರೆ. ಗೌರವ ಶಿಕ್ಷಕಿಯರಿಗೆ ಪಗಾರ ನೀಡಿ ಗುಣಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಬಿಸಿಯೂಟ ಅಡುಗೆಯ ಆಯಾ ಮಲ್ಲಿಗೆ ಕೊಯ್ದು ಹೆಣೆದು ನೀಡುತ್ತಾರೆ. ನಿತ್ಯ ಕೂಲಿ ಕೆಲಸಕ್ಕೆ ಹೋಗುವ ಅಧ್ಯಕ್ಷರು ಮಲ್ಲಿಗೆಯ ಅಟ್ಟಿಯನ್ನು ಕಬಕಕ್ಕೆ ಕಳುಹಿಸಿ ಮಾರಾಟದ ಹಣ ಸಂಗ್ರಹಿಸಿ ಶಾಲೆಯನ್ನು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದಾರೆ.
ಇಡೀ ಕುಳ ಗ್ರಾಮಕ್ಕೆ ನಮ್ಮದು ಒಂದೇ ಸರಕಾರಿ ಶಾಲೆ ಇರುವುದಾಗಿದೆ. ಶಾಲೆಗೆ 1.06 ಎಕ್ರೆ ಜಮೀನಿದೆ. ಶಾಲಾ ವಠಾರದಲ್ಲಿ ಸೊಂಪಾಗಿ ಹೂವಿನ ಗೊಂಚಲಿನ ಮೂಲಕ ಮಲ್ಲಿಗೆ ಗಿಡ ನಳನಳಿಸುವುದನ್ನು ಸಂಭ್ರಮದಿಂದ ತೋರಿಸುತ್ತಾರೆ.
7ರಿಂದ 80ಕ್ಕೆ ನೆಗೆದ ಸಾಧನೆ:
2007ರಲ್ಲಿ ಈ ಶಾಲೆಯಲ್ಲಿ ಇದ್ದದ್ದು ಕೇವಲ 7 ಮಂದಿ ವಿದ್ಯಾರ್ಥಿಗಳು. ಅಂದು ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿಯಿಂದ ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಚ್ಚುಗಡೆ ಶಾಲೆ ಶಿಫಾರಸು ಕೂಡಾ ಪಡೆದಿತ್ತು. ಶಾಲಾಭಿವೃದ್ದಿ ಸಮಿತಿ ಪದಾಽಕಾರಿಗಳ ನಿರಂತರ ಪ್ರಯತ್ನದ ಫಲವಾಗಿ ಹಂತದಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಸಮಿತಿಯು, ಮೂವರು ಗೌರವ ಶಿಕ್ಷಕಿಯರನ್ನು ನೇಮಿಸಿದೆ. ಸ್ಮಾರ್ಟ್ ಕ್ಲಾಸ್‌ಗಳಿಗೆ ಬೇಕಾದ ಸೌಕರ್ಯ ಒದಗಿಸಿದೆ. ಶಿಕ್ಷಕಿಯರಿಗೆ ಪಗಾರ ನೀಡಲು ಆದಾಯದ ಮೂಲವಾಗಿ ಕಳೆದ ಹತ್ತು ವರ್ಷಗಳಿಂದ ಹಿಂದೆಯೇ ಮಲ್ಲಿಗೆ ಗಿಡ ಬೆಳೆಸಿದ್ದರು.
ಅನೇಕರು ಶಾಲೆಯ ಹೆಸರಲ್ಲಿ ಪ್ರಚಾರ, ದೊಡ್ಡ ಸಾಧನೆ ಮಾಡಿದ್ದಾಗಿ ಬಿಂಬಿಸಿಕೊಳ್ಳುವ ಇಂದಿನ ಶಿಕ್ಷಣ ತೆವಲಿನ ನಡುವೆ. ನಿಜವಾಗಿ ಪ್ರಾಮಾಣಿಕ ಸಾಧನೆ ಮಾಡಿದವರು ತೆರೆಯ ಮರೆಯಲ್ಲಿ ಯಾರಿಗೂ ಕಾಣದಂತೆ, ಪ್ರಚಾರ, ಪ್ರಶಸ್ತಿಗೆ ಬಯಸದೆ ಕರ್ತವ್ಯ ನಿರ್ವಹಿಸುತ್ತಾರೆ. ಅವರೇ ನಿಜವಾದ ಶಿಕ್ಷಣ ಪ್ರೇಮಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ.
ಅರ್ಜಿ ಸಲ್ಲಿಸದೆ ಸಿಕ್ಕಿದೆ ಪ್ರಶಸ್ತಿ:
ಇಲ್ಲಿ ವಿಲ್ಮಾ ಸಿಕ್ವೇರಾ ಪ್ರಭಾರ ಮುಖ್ಯಶಿಕ್ಷಕಿಯಾಗಿದ್ದಾರೆ. ಶಾಲೆಯ ಅಭಿವೃದ್ದಿಯ ವಿಚಾರ ಬಂದಾಗ ತನ್ನ ಮಾಸಿಕ ವೇತನವನ್ನು ವೆಚ್ಚಕ್ಕಾಗಿ ವಿನಿಯೋಗಿಸಲು ಹಿಂದೆಮುಂದೆ ನೋಡುವುದಿಲ್ಲ. ಯಾವುದೇ ಅರ್ಜಿ ಸಲ್ಲಿಸದೆ ಸ್ವತಃ ಕ್ಷೇತ್ರ ಶಿಕ್ಷಣಾಽಕಾರಿ ಶಿಫಾರಸು ಮಾಡಿ 2018-19 ಸಾಲಿನಲ್ಲಿ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ.
ಶಾಲೆಗಾಗಿ ಊರವರು ಕೊಳವೆ ಬಾವಿ ಮಾಡಿಸಿದ್ದಾರೆ. ಅದಕ್ಕೆ ಮಳೆಗಾಲದ ನೀರ ಇಂಗುಗುಂಡಿ ಅಳವಡಿಸಿ ನೀರಿನ ಕೊರತೆ ಇಲ್ಲದಂತೆ ನೋಡಿಕೊಂಡಿದ್ದಾರೆ. ಇಲ್ಲಿಗೆ 2019-20 ಸಾಲಿಗೆ 6ನೇ ತರಗತಿ ಮಂಜೂರಾಗಿದೆ. ಗುಣಮಟ್ಟದ ಶಿಕ್ಷಣದ ಕಾರಣ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಸರಕಾರ ಆಂಗ್ಲ ಮಾದ್ಯಮ ಮಾಡಲು ಅವಕಾಶ ಕಲ್ಪಿಸಿದ್ದರಿಂದ ಎಲ್‌ಕೆಜಿ ತರಗತಿ ಆರಂಭಿಸುವ ಬಗ್ಗೆ ಶಾಲಾಭಿವೃದ್ದಿ ಸಮಿತಿ ಚಿಂತನೆ ನಡೆಸಿದೆ.
ಕಳೆದ ಹತ್ತು ವರ್ಷಗಳಿಂದ ನಾವು ಶಾಲೆಯ ಶೈಕ್ಷಣಿಕ ಮಟ್ಟ ಸುಧಾರಿಸುತ್ತಾ ಬಂದುದರಿಂದ ಮಕ್ಕಳ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಪ್ರಸ್ತುತ 33 ಮಕ್ಕಳ ಸೇರ್ಪಡೆಯೊಂದಿಗೆ ಮಕ್ಕಳ ಸಂಖ್ಯೆ ೮೦ಕ್ಕೆ ಏರಿಕೆಯಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ನೂರರ ಗಡಿ ದಾಟಿಸುವುದಕ್ಕಾಗಿ ಇಂಗ್ಲಿಷ್ ಕಲಿಕೆಯ ತರಗತಿ ಆರಂಭಿಸುವ ಯೋಜನೆ ಇದೆ.
ಹೊನ್ನಪ್ಪ ಗೌಡ
ಅಧ್ಯಕ್ಷರು, ಶಾಲಾಭಿವೃದ್ದಿ ಸಮಿತಿ ಓಜಲ
ಓಜಲ ಶಾಲೆ 1968ರಲ್ಲಿ ಆರಂಭವಾಗಿತ್ತು. ನೈರುತ್ಯ ರೈಲ್ವೆ ಮೈಸೂರು ವಿಭಾಗವು ಶಾಲೆಗೆ 2ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದೆ ( ಬಂಟ್ವಾಳ ತಾಲೂಕಿನಲ್ಲಿ 2 ಶಾಲೆಗೆ ಇಂತಹ ಸೌಕರ್ಯ ಸಿಕ್ಕಿದೆ) ಸಾರ್ವಜನಿಕ ಶಿಕ್ಷಣ ಇಲಾಖೆಯ ನಲಿ ಕಲಿಯಲ್ಲಿ ಎಲ್ಲ ಸೌಲಭ್ಯವನ್ನು ಪಡೆದುಕೊಂಡಿದೆ. ಗೌರವ ಶಿಕ್ಷಕಿಯರಿಗೆ ಸಂಭಾವನೆಗೆ ಮಲ್ಲಿಗೆ ಕೃಷಿ ಆದಾಯವಿದೆ. ಕಡಿಮೆ ಆದರೆ ನಾವು ಭರಿಸುತ್ತೇವೆ. ಮಧ್ಯಾಹ್ನದ ಬಿಸಿಯೂಟಕ್ಕೆ ತರಕಾರಿ ಬೆಳೆಯುತ್ತೇವೆ. ಊರಿನ ಜನ ಶಾಲೆಯ ಅಭಿವೃದ್ದಿಯಲ್ಲಿ ಸರ್ವ ಸಹಕಾರ ನೀಡುತ್ತಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚುವುದರಿಂದ ನಮಗೊಂದು ಸುಸಜ್ಜಿತ ಕಟ್ಟಡ ಬೇಕು.
ವಿಲ್ಮಾ ಸಿಕ್ವೇರಾ
ಪ್ರಭಾರ ಮುಖ್ಯ ಶಿಕ್ಷಕಿ
ಅತ್ಯಂತ ಕಡಿಮೆ ಗೈರುಹಾಜರಾತಿಯ ಶಾಲೆ ಎಂಬ ಕೀರ್ತಿ ಓಜಲ ಶಾಲೆಗಿದೆ. ಶಾಲಾಭಿವೃದ್ದಿ ಸಮಿತಿ ಸದಸ್ಯರು ಎಲ್ಲರೂ ಕೂಲಿ ಕಾರ್ಮಿಕರು. ಆದರೆ ಹೃದಯ ಶ್ರೀಮಂತ ವ್ಯಕ್ತಿಗಳು. ಮೇಸ್ತ್ರಿ, ವೆಲ್ಡರ್, ಕಾರ್ಪೆಂಟರ್, ಸಾರಣೆ ಎಂದು ಎಲ್ಲರೂ ಒಂದಲ್ಲ ಒಂದು ಕೆಲಸ ಮಾಡುವ ವ್ಯಕ್ತಿಗಳಾಗಿದ್ದು ಶಾಲೆಯಲ್ಲಿ ನಡೆದಿರುವ ಎಲ್ಲ ಅಭಿವೃದ್ದಿ ಕೆಲಸಗಳನ್ನು ಅವರು ಸ್ವಯಂಸ್ಪೂರ್ತಿಯಿಂದ ಶ್ರಮದಾನದ ಮೂಲಕ ಮಾಡುತ್ತಿದ್ದಾರೆ. ಸಂದರ್ಭ ಬಂದರೆ ಎಲ್ಲ ಕೆಲಸಕ್ಕೂ ಸೈ ಎನ್ನುವವರು. ಶಾಲೆಗಾಗಿ ಅವಿಶ್ರಾಂತ ದುಡಿಯುವ ಮುಖ್ಯಶಿಕ್ಷಕಿಯವರ ಶ್ರಮಸಾಧನೆ ಪ್ರೀತಿಯನ್ನು ಕಂಡು ನಾವೇ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಫಾರಸು ಮಾಡಿ ಪ್ರಶಸ್ತಿಯನ್ನು ಕೊಡಿಸಿದ್ದೇವೆ.
ಯನ್. ಶಿವಪ್ರಕಾಶ್
ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ