“ಜಗತ್ತು ನಿಯಮವನ್ನು ಅದೇ ರೂಪಿಸುತ್ತಿದೆ. ಅದಕ್ಕೆ ನಾವು ಒಗ್ಗಿಕೊಳ್ಳಬೇಕು. ನಮ್ಮಲ್ಲಿ ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ ಇದ್ದರೆ ಸಾಲದು ಜ್ಞಾನ ಶಕ್ತಿಯೂ ಬೇಕು. ನಮ್ಮ ನಾಲಿಗೆಯ ತುದಿಯಂತೆ ಲಕ್ಷ್ಮೀಯು ಚಲನಶೀಲವಾಗಿರುವಳು. ಸಂಪತ್ತು ಮತ್ತು ಆಪತ್ತು ನಮ್ಮ ನಾಲಿಗೆಯಲ್ಲಿದೆ. ಅದಕ್ಕಾಗಿ ವಾಕ್ ಸರಿಯಾಗಿದ್ದರೆ ಲಕ್ಷ್ಮೀ ಒಲಿಯುತ್ತಾಳೆ. ಸತ್ಯವನ್ನು ಅನುಸರಿಸಿ ಬಂದ ಸಂಪತ್ತಿನಿಂದ ಆಪತ್ತಿಲ್ಲ. ತೃಪ್ತಿಯ ಮೂಲದಲ್ಲಿ ಲಕ್ಷ್ಮೀ ಇರುವಳು. ಸಂತೃಪ್ತಿಯೇ ಸಂಪತ್ತು. ಇದ್ದುದರಲ್ಲಿ ಸುಖ ಪಟ್ಟರೆ ನಾವು ಜೀವನದಲ್ಲಿ ಸಂತಸದಲ್ಲಿರುತ್ತೇವೆ. ಹಾಗಂತ ನಮ್ಮ ಪ್ರಯತ್ನ, ಪರಿಶ್ರಮವನ್ನು ಬಿಡಬಾರದು. ಯಶಸ್ಸಿನ ಗುಟ್ಟು ಪ್ರಯತ್ನಶೀಲತೆಯಲ್ಲಿ ಅಡಗಿದೆ. ಧರ್ಮಶ್ರದ್ಧೆಯಿಂದ ಸಂಪಾದಿಸಿದ ಸಂಪತ್ತು ಶ್ರೇಷ್ಠ. ಭವಿಷ್ಯಪುರಾಣದಲ್ಲಿ ಉದ್ಧೃತವಾದ ಶ್ರೀವರಮಹಾಲಕ್ಷ್ಮೀ ವ್ರತಪೂಜೆಯನ್ನು ಹುಣ್ಣಿಮೆಯ ಪೂರ್ವದಲ್ಲಿ ಬರುವ ಶ್ರಾವಣದ ಮೊದಲ ಶುಕ್ರವಾರ ಆಚರಿಸುವುದು ವಿಶೇಷ. ಇದರಿಂದ ಉತ್ತಮ ಫಲವು ಲಭಿಸುತ್ತದೆ. ಇಂತಹ ದೇವತಾಚರಣೆಗಳ ಹಿಂದೆ ಸಂಸ್ಕೃತಿ ಅಡಗಿದೆ. ನಮ್ಮ ಭಾರತೀಯ ಸಂಸ್ಕೃತಿಗೆ ಪೂರಕವಾದವುಗಳೇ ಆಗಿದೆ” ಎಂದು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಜರಗಿದ ಶ್ರೀ ವರಮಹಾಲಕ್ಷ್ಮೀವ್ರತ ಪೂಜೆಯ ಸಂದರ್ಭ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಸಹಕರಿಸಿದ್ದು, ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಸದಸ್ಯರು ಹಾಗೂ ಗುರುಬಂಧುಗಳು ಪಾಲ್ಗೊಂಡಿದ್ದರು.

