ಬಂಟ್ವಾಳ, ಡಿ. 7: ದೇವಸ್ಥಾನವೊಂದರ ಬಳಿ ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಗುಂಡಿ ತೆಗೆಯುತ್ತಿದ್ದಾಗ ಸಮಿಪದ ಗುಡ್ಡ ಕುಸಿದ ಪರಿಣಾಮ ಮೂವರು ಕಾರ್ಮಿಕರ ಸ್ಥಳದಲ್ಲೇ ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೊಪಾಡಿ ಗ್ರಾಮಾದ ಒಡಿಯೂರು ಎಂಬಲ್ಲಿ ಶನಿವಾರ ನಡೆದಿದೆ.

ವಿಟ್ಲ ಕಸಬಾ ಗ್ರಾಮದ ಆಲಂಗಾರು ನಿವಾಸಿ ಬಾಳಪ್ಪ ನಾಯ್ಕ (56), ಮುರುವ ನಿವಾಸಿ ಮಾನೀಲ ಗ್ರಾಮದ ಪ್ರಕಾಶ ಹಾಗೂ ಕಾಪುಮಜಲು ನಿವಾಸಿ, ವಿಟ್ಲ ಪಡ್ನೂರು ಗ್ರಾಮದ ರಮೇಶ್ (50) ಎಂಬವರು ಮೃತಪಟ್ಟಿದ್ದು, ಮತ್ತೋರ್ವ ಕಾರ್ಮಿಕ, ಉಳ್ಳಾಲ ಕುತ್ತಾರು ನಿವಾಸಿ ಪ್ರಭಾಕರ್ ಗಾಯಗೊಂಡಿದ್ದಾರೆ.
ಘಟನೆ ವಿವರ:
ಬಂಟ್ವಾಳ ತಾಲೂಕಿನ ಕರೊಪಾಡಿ ಗ್ರಾಮಾದ ಒಡಿಯೂರು ಎಂಬಲ್ಲಿ ಸ್ಥಳೀಯ ದೇವಸ್ಥಾನವೊದರ ಬಳಿ ಅನ್ನ ಛತ್ರದ ಕಟ್ಟಡ ನಿರ್ಮಾಣ ನಡೆಯುತ್ತಿತ್ತು. ಈ ಪ್ರದೇಶದಲ್ಲಿ ಗುಡ್ಡವೊಂದನ್ನು ಜೆಸಿಬಿ ಮೂಲಕ ಅಗೆದು ನೆಲಸಮ ಮಾಡಲಾಗಿತ್ತು. ಇಂದು ಸಂಜೆ 5:30 ಗಂಟೆ ಸುಮಾರಿಗೆ ಕಟ್ಟಡ ಕಾಮಗಾರಿಗೆ ಜೆಸಿಬಿ ಪಿಲ್ಲರ್ ಗುಂಡಿ ತೆಗೆಯುತ್ತಿದ್ದಾಗ ಏಕಾಏಕಿಮಣ್ಣು ಕುಸಿದು ಬಿದ್ದಿದೆ. ಪರಿಣಾಮ ಪಿಲ್ಲರ್ ನೊಳಗಿದ್ದ ನಾಲ್ವರು ಕಾರ್ಮಿಕರ ಮೇಲೆ ಮಣ್ಣು ಬಿದ್ದಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ವಿಟ್ಲ ಠಾಣಾ ಪೊಲೀಸರು ದಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ..
ಮೂವರು ಕಾರ್ಮಿಕರ ಮೃತದೇಹಗಳನ್ನು ಮತ್ತು ಗಾಯಾಳುವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಬಗ್ಗೆ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್,
ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಭೇಟಿ ನೀಡಿದ್ದಾರೆ.
