ವಿಟ್ಲ: ತ್ರಿಕರಣಪೂರ್ವಕವಾಗಿ ಭಗವಂತನಲ್ಲಿ ಪರಿಶುದ್ಧ ಭಕ್ತಿಯಿಟ್ಟು ಮಾಡಿದ ಪ್ರಾರ್ಥನೆಯಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಅಧ್ಯಾತ್ಮದ ಆನಂದವನ್ನು ಅನುಭಾವದ ಮೂಲಕ ಅನುಭವಿಸಬಹುದು. ಭಗವತ್ ಪ್ರೇಮದೊಂದಿಗೆ ಪ್ರತಿಯೊಬ್ಬರೂ ದೇಶಪ್ರೇಮವನ್ನು ಬೆಳೆಸಿಕೊಂಡಾಗ ಸಮೃದ್ಧಿಪೂರ್ಣ ದೇಶ ನಿರ್ಮಾಣವಾಗಲು ಸಾಧ್ಯವಿದೆ. ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜುಲೈ 29ರಂದು ನಡೆಯುವ ಒಡಿಯೂರು ಶ್ರಿಗಳವರ ಜನ್ಮದಿನೋತ್ಸವ-ಶ್ರೀ ಒಡಿಯೂರು ಗ್ರಾಮೋತ್ಸವ 2019ರ ಅಂಗವಾಗಿ ನಡೆದ ಒಳಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇಹವೆಂಬ ದೇವಾಲಯದಲ್ಲಿ ಜೀವನು ಪರಿಶುದ್ಧನಾದಾಗ ದೇವನೊಂದಿಗೆ ಸಖ್ಯ ಬೆಳೆಸಬಹುದು. ನಮ್ಮ ಒಳಾಂಗಣದಲ್ಲಿರುವ ಸಾಮಾರ್ಥ್ಯವನ್ನು ಸಕಾಲಿಕವಾಗಿ ಪ್ರಕಟಗೊಳಿಸಬೇಕು ಎಂದರು.
ಸಾಧ್ವೀ ಮಾತಾನಂದಮಯೀ ಅವರು ದಿವ್ಯ ಸಾನಿಧ್ಯ ಕರುಣಿಸಿದ್ದರು. ಮಾಜಿ ಯೋಧ ಹಿರಿಯರಾದ ವಿಠಲ ಶೆಟ್ಟಿ ಸಾಲೆತ್ತೂರು, ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಗ್ರಾಮೋತ್ಸವ ಸಮಿತಿ ಸಂಚಾಲಕ ಅಜಿತ್‌ನಾಥ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ, ನಿರ್ದೇಶಕರಾದ ಲಿಂಗಪ್ಪ ಗೌಡ ಪನೆಯಡ್ಕ, ವೇಣುಗೋಪಾಲ ಮಾರ್ಲ, ಒಡಿಯೂರು ಕ್ಷೇತ್ರದ ಕಾರ್‍ಯನಿರ್ವಾಹಕ ಪದ್ಮನಾಭ ಒಡಿಯೂರು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಯಶವಂತ ವಿಟ್ಲ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ ಸ್ವಾಗತಿಸಿದರು. ಒಡಿಯೂರುಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ವಂದಿಸಿದರು. ಒಡಿಯೂರುಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಕಿ ಲೀಲಾ ಕೆ. ಕಾರ್‍ಯಕ್ರಮ ನಿರೂಪಿಸಿದರು.
ಶ್ರೀ ಸಂಸ್ಥಾನದ ಜ್ಞಾನಮಂದಿರದಲ್ಲಿ ಬಾಲಕಬಾಲಕಿಯರಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಮುಕ್ತ ವಿಭಾಗಗಳಲ್ಲಿ ನಾನಾ ಒಳಾಂಗಣ ಸ್ಪರ್ಧೆಗಳು ನಡೆದವು.

