ವಿಟ್ಲ: ಜೀವನದ ಸಂವಿಧಾನ ಧರ್ಮವಾಗಿದ್ದು, ಭಾರತದ ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬು ಕಾರ್‍ಯವಾಗಬೇಕು. ಧರ್ಮ ನಿಷ್ಠೆಯಿಂದ ಬದುಕುವ ರಾಜನಿಂದ ಪ್ರಜೆಗಳು ಕ್ಷೇಮವಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಾಲಾ ಪ್ರಾರಂಭೋತ್ಸವ 2018-19ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿ ಜೀವನದಲ್ಲಿ ಹಾದಿ ತಪ್ಪದ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರಿಗೆ ಹಾಗೂ ಪೋಷಕರಿಗಿದೆ. ಕನ್ನಡ ಮಾಧ್ಯಮ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ತುಳುವಿನಲ್ಲಿಯೇ ಪರೀಕ್ಷೆ ಬರೆಯುವ ರೀತಿಯ ವ್ಯವಸ್ಥೆ ಜಾರಿಗೆ ತರಲು ಶಿಕ್ಷಕರು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಮಿತ್ತನಡ್ಕ – ಕನ್ಯಾನ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಚಂದ್ರಶೇಖರ್ ಮಾತನಾಡಿ ಜ್ಞಾನವನ್ನು ಯಾರಿಂದರೂ ಕಳ್ಳತನ ಮಾಡಲು ಸಾಧ್ಯವಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಮಾನ್ಯ ವಿಚಾರಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಇಲಾಖೆಯಿಂದ ನಡೆಸುವ ಕಾರ್‍ಯಕ್ರಮಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಭಾಗವಹಿಸುವ ರೀತಿಯಲ್ಲಿ ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದು ತಿಳಿಸಿದರು.
ವಿದ್ಯಾರ್ಥಿ ಜಿತೇಶ್ ನೂತನವಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಎ. ಅಭಿನಂದನಾ ಮಾತುಗಳನ್ನಾಡಿದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಾಲಾ ಕ್ಯಾಲೆಂಡರ್ ಬಿಡುಗಡೆ ನಡೆಸಯಿತು.
ಒಡಿಯೂರು ಗ್ರಾಮವಿಕಾಸ ಯೋಜನೆಯ ನಿರ್ದೇಶಕ ಕಿರಣ್, ಕ್ಷೇತ್ರದ ಕಾರ್‍ಯ ನಿರ್ವಾಹಕ ಪದ್ಮನಾಭ ಒಡಿಯೂರು, ಯಶವಂತ ವಿಟ್ಲ, ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ತಾರಾನಾಥ ಒಡಿಯೂರು, ಒಡಿಯೂರು ಗ್ರಾಮ ವಿಕಾಸ ಯೋಜನೆ ಕರೋಪಾಡಿ ಅಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು ಉಪಸ್ಥಿತರಿದ್ದರು.
ವಿದ್ಯಾ ಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ರೇಣುಕಾ ಎಸ್. ರೈ ವಂದಿಸಿದರು. ವಿದ್ಯಾರ್ಥಿ ಅನೀಶ್ ಕಾರ್‍ಯಕ್ರಮ ನಿರೂಪಿಸಿದರು.
