ವಿಟ್ಲ: ಪ್ರಕೃತಿಯನ್ನು ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರಕೃತಿ ಮತ್ತು ಮನುಷ್ಯನಿಗೆ ಅವಿನಾಭಾವ ಸಂಬಂಧವಿದೆ. ಶಿಬಿರಗಳು ಪ್ರತಿಭೆಗಳನ್ನು ಅರಳಿಸುವುದರೊಂದಿಗೆ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಆತ್ಮವಿಶ್ವಾಸ ಅತಿಯಾದಲ್ಲಿ ನಮ್ಮನ್ನು ಕುಗ್ಗಿಸುತ್ತದೆ. ಶಿಕ್ಷಣದ ಬೇರುಗಳು ಕಹಿಯಾಗಿದ್ದರೂ ಭವಿಷ್ಯದಲ್ಲಿ ಅದರ ಫಲ ಸಿಹಿಯಾಗಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ ಮತ್ತು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಆಯೋಜಿಸಿದ್ದ ಎರಡು ದಿನಗಳ ವಸಂತ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಶ್ರೀ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಯಶವಂತ್ ವಿಟ್ಲ, ಸಂಪನ್ಮೂಲ ವ್ಯಕ್ತಿಗಳಾದ ಲೋಹಿತ್ ಭಂಡಾರಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪ್ರಧಾನ ನಿರ್ದೇಶಕ ಕಿರಣ್ ಉಡುಪಿ, ಶಾಲಾ ಸಂಚಾಲಕರಾದ ಗಣಪತಿ ಭಟ್ ಸೇರಾಜೆ, ಮುಖ್ಯೋಪಾಧ್ಯಾಯರಾದ ಜಯಪ್ರಕಾಶ್ ಶೆಟ್ಟಿ, ಶಿಬಿರಾರ್ಥಿಗಳಾ ಕನ್ಯಾನ ಬಾಲವಿಕಾಸ ಕೇಂದ್ರದ ರಿತೇಶ್, ಪೆರುವಾಯಿ ಬಾಲವಿಕಾಸ ಕೇಂದ್ರದ ದೀಕ್ಷಿತಾ ಉಪಸ್ಥಿತರಿದ್ದರು.
ಸುಮಾರು 200ಕ್ಕೂ ಮಿಕ್ಕಿ ವಿದ್ಯಾರ್ಥಿಗಳು, ಬಾಲವಿಕಾಸ ಕೇಂದ್ರದ ಮಾತಾಜಿಯವರು, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕ ವೃಂದದವರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ವಂದಿಸಿದರು. ಶಿಕ್ಷಕಿ ವೇದಾವತಿ ಕಾರ್‍ಯಕ್ರಮ ನಿರೂಪಿಸಿದರು.
