ಒಡಿಯೂರು: ಜ್ಞಾನ ಇಲ್ಲದ ಬದುಕು ಬದುಕಲ್ಲ. ಸಮಸ್ಯೆ ಬಂದರೆ ಅನುಭವ ಬರುತ್ತದೆ. ಅನುಭವದಿಂದ ನಮಗೆ ಜ್ಞಾನ ಲಭಿಸುತ್ತದೆ. ಲೌಕಿಕ ಜ್ಞಾನದ ಜೊತೆಗೆ ಅಲೌಕಿಕ ಜ್ಞಾನವೂ ನಮಗೆ ಅವಶ್ಯಕವಾಗಿದೆ. ಅಧ್ಯಾತ್ಮ ವಿದ್ಯೆಯ ಮೂಲಕ ನಾವು ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ನುಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನವರಾತ್ರಿಯ ಪ್ರಯುಕ್ತ ಜರಗಿದ ಶ್ರೀ ಶಾರದಾ ಪೂಜೆಯೊಂದಿಗೆ ನಡೆದ ಶ್ರೀ ಸರಸ್ವತಿ ಹವನದ ಪೂರ್ಣಾಹುತಿಯ ಸಂದರ್ಭ ಆಶೀರ್ವಚನಗೈದ ಪೂಜ್ಯ ಶ್ರೀಗಳವರು ಜ್ಞಾನವನ್ನು ಕರುಣಿಸುವ ದೇವತೆ ಶಾರದೆಯ ಪೂಜೆಯನ್ನು ಶರದೃತುವಿನಲ್ಲಿ ಮಾಡುತ್ತೇವೆ. ನಾವು ಸಹ ಪರಿಶುದ್ಧ ಮನಸ್ಸಿನಿಂದ ದೇವಿಯ ಆರಾಧನೆ ಮಾಡುವುದರಿಂದ ಸತ್ಫಲ ಪ್ರಾಪ್ತಿಯಾಗುತ್ತದೆ. ಸಂತೃಪ್ತಿಯೇ ಸಂಪತ್ತು. ಓಂಕಾರ ಸ್ವರೂಪಿಣಿಯಾದ ದೇವಿಯ ಅನುಗ್ರಹದ ಮೂಲಕ ಕೋವಿಡ್ ೧೯ ಕೊರೋನಾ ಮಹಾಮಾರಿಯಿಂದ ವಿಶ್ವವೇ ಮುಕ್ತವಾಗಲಿ ಎಂದರು.
ಈ ಸಂದರ್ಭದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ವೇ.ಮೂ. ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಸರಸ್ವತಿ ಹವನ ನಡೆಯಿತು.














