ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವು ಸ.ಹಿ.ಪ್ರಾ. ಶಾಲೆ ಕೊಡ್ಮಣ್ ಇಲ್ಲಿ ಉದ್ಘಾಟನೆಗೊಂಡಿತು. ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಖ್ಯಾತ ವಕೀಲ ಹಾಗೂ ನಮ್ಮ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿ ಪುಳಿಂಚ ಶ್ರೀಧರ ಶೆಟ್ಟಿ ಇವರು ಮಾತನಾಡುತ್ತಾ ಕೇವಲ ಶ್ರಮದಾನವೊಂದೇ ಈ ಶಿಬಿರದ ಉದ್ಧೇಶವಲ್ಲ ಬದಲಾಗಿ ಸಾಮೂಹಿಕ ಸಹಜೀವನ ಮತ್ತು ಪ್ರತಿಭಾನ್ವೇಷಣೆಯೂ ಇದರೊಂದಿಗೆ ಕೂಡಿಕೊಂಡಿದೆ. ಅನೇಕರಿಗೆ ತಮ್ಮ ಒಳಗಿರುವ ನೈಜ ಪ್ರತಿಭೆಯನ್ನು ತೋರ್ಪಡಿಸಲು ಈ ಶಿಬಿರ ಅವಕಾಶ ನೀಡಲಿದೆ. ನಾನು ಕಲಿತ ವಿದ್ಯಾಸಂಸ್ಥೆಯ ಹಿರಿಯರ ಜೊತೆಗೆ ವೇದಿಕೆ ಹಂಚಿಕೊಂಡು ಅದೇ ವಿದ್ಯಾಸಂಸ್ಥೆಯ ಶಿಬಿರದ ಉದ್ಘಾಟನೆ ಮಾಡಲು ಅತೀವ ಸಂತಸ ಮತ್ತು ಗೌರವ ಎಂದೆನಿಸುತ್ತಿದೆ. ಪ್ರಸಿದ್ಧಿ ಹೆಸರು ಹಾಗೂ ಪ್ರಚಾರವೇ ಪ್ರಮುಖವಾಗಿರುವ ಈ ಕಾಲದಲ್ಲಿ ಅವೆಲ್ಲವನ್ನೂ ಬಯಸದೇ ಕೇವಲ ಧ್ಯೇಯವೊಂದೇ ಗುರಿಯಾಗಿರುವ ಈ ಸಂಸ್ಥೆಯ ಹಿರಿಯರನ್ನು ನಾನು ಶಿಕ್ಷಕನಾಗಿ ಪಡೆದುದು ನನ್ನ ಪಾಲಿನ ಪುಣ್ಯವೇ ಸರಿ ಎಂದರು.
ಆಶಯ ಭಾಷಣ ಮಾಡಿದ ಹೊಸದಿಗಂತ ಪತ್ರಿಕೆಯ ಕೀರ್ತಿರಾಜ್ ಇವರು ತಮ್ಮ ಜೀವನದ ಹತ್ತಾರು ಘಟನೆಗಳನ್ನು ಉಲ್ಲೇಖಿಸಿ ಎನ್.ಎಸ್.ಎಸ್. ಮಾಡಿರುವ ಪರಿವರ್ತನೆಯ ಕಾರ್ಯಗಳನ್ನು ತೆರೆದಿಟ್ಟರು. ಅಲ್ಲದೇ ತಮ್ಮದೇ ಶೈಲಿಯಲ್ಲಿ ಶಿಬಿರದಿಂದ ಕಲಿಯಬೇಕಾದ ಅನೇಕ ವಿಚಾರಗಳನ್ನು ಮಂಡಿಸಿದರು.
ವಿದ್ಯಾಸಂಸ್ಥೆಯ ಸಂಚಾಲಕ ವಸಂತ ಮಾಧವ ಅಧ್ಯಕ್ಷೀಯ ನುಡಿಗಳನ್ನಾಡಿ ಸೇವೆಯ ನಿಜವಾದ ಅರ್ಥ ಏನೆಂದು ಅರಿತಾಗಲೇ ಸರಿಯಾದ ದಿಕ್ಕಿಗೆ ನಾವು ಹೋಗಲು ಸಾಧ್ಯ ಇಲ್ಲವಾದಲ್ಲಿ ಕೇವಲ ವರದಿ ಭಾವಚಿತ್ರಗಳಿಗೆ ಈ ಕಾರ್ಯ ಮುಕ್ತಾಯವಾಗುತ್ತದೆ ಎಂದರು. ಮೇರಮಜಲು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ ನಾಯ್ಗ, ಸದಸ್ಯೆ ಜಯಶ್ರೀ ಕರ್ಕೆರ ಶುಭ ಹಾರೈಸಿದರು. ವಿದ್ಯಾಕೇಂದ್ರದ ಅಧ್ಯಕ ನಾರಾಯಣ ಸೋಮಯಾಜಿ ಶ್ರಮದಾನದ ಉದ್ಘಾಟನೆ ಮಾಡಿದರು. ಕೊಡ್ಮಣ್ ಕಾಂತಪ್ಪ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುರೇಶ್, ವಜ್ರನಾಭ ಶೆಟ್ಟಿ ಅರ್ಕುಳ ಬೀಡು, ಪ್ರಾಚಾರ್ಯ ಕೃಷ್ಣಪ್ರಸಾದ್ ಉಪಸ್ಥಿತರಿದ್ದ ಈ ಉದ್ಘಾಟನಾ ಸಮಾರಂಭದಲ್ಲಿ ಎನ್ ಎಸ್ ಎಸ್ ಸಂಯೋಜನಾಧಿಕಾರಿ ಹರೀಶ್ ಸ್ವಾಗತಿಸಿ, ಯತಿರಾಜ್ ವಂದಿಸಿ, ಲತಾಶ್ರೀ ನಿರೂಪಿಸಿದರು. ಶಿಬಿರದಲ್ಲಿ 52 ಶಿಬಿರಾರ್ಥಿಗಳಿದ್ದು 5 ಮಂದಿ ಉಪನ್ಯಾಸಕರು ಹಾಗೂ ಊರಿನ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು

