ವಿಟ್ಲ : ಪುಣಚ ಪರಿಯಾಲ್ತಡ್ಕ ಜಂಕ್ಷನ್‌ನಲ್ಲಿ ಬಿಜೆಪಿ ನೇತೃತ್ವದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ನಡೆದ ವಿಜಯೋತ್ಸವದ ಸಭೆಯಲ್ಲಿ ಕೆಲವು ಬಿಜೆಪಿ ನಾಯಕರು ಪಕ್ಷದ ತತ್ವ ಸಿದ್ಧಾಂತವನ್ನು ಬದಿಗಿಟ್ಟು ಕಾಂಗ್ರೆಸ್ ಮುಖಂಡ, ಕೊಳ್ನಾಡು ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.
ಅವರು ಸೋಮವಾರ ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಧೋರಣೆಯನ್ನು ತ್ಯಜಿಸಿ, ಧರ್ಮ ನಿಂದನೆ, ಜಾತಿನಿಂದನೆ ಮಾಡಿರುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ರಾಜಕೀಯದಲ್ಲಿ ಸೋಲು ಗೆಲುವು ನಿಶ್ಚಿತ. ನಿರಂತರವಾಗಿ ಏರು ಪೇರುಗಳಿರುತ್ತವೆ. ರಾಜಕಾರಣಿಗಳು ಅದನ್ನು ಪ್ರಜಾಪ್ರಭುತ್ವದ ಗೆಲುವು ಎಂದು ಸ್ವೀಕರಿಸುತ್ತಾರೆ. ಆದರೆ ಅವಮಾನಕರವಾಗಿ ನಿಂದಿಸುವುದು ಸರಿಯಲ್ಲ ಎಂದು ಅವರು ದೂರಿದರು.
ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಎಂ.ಎಸ್.ಮಹಮ್ಮದ್ ಅವರ ಜಾತ್ಯತೀತ ಮನೋಭಾವನೆಯನ್ನು ಗೌರವಿಸಿ, ಸಮ್ಮಾನಿಸಿದ್ದಾರೆ. ಹಿಂದೂ ಬಾಂಧವರು ಅವರನ್ನು ಗುರುತಿಸಿ ಗೌರವಿಸಿರುವುದನ್ನು ಮರೆತು ಎಲ್ಲಿಂದಲೋ ಬಂದು ಅವರ ಗೌರವಕ್ಕೆ ಚ್ಯುತಿ ಬಳಿಯಲು ಯತ್ನಿಸಿರುವುದನ್ನು ನಾವು ಖಂಡಿಸುತ್ತೇವೆ ಮತ್ತು ಹಿರಿಯ ನಾಯಕರು ಈ ಯುವಕರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಆಗ್ರಹಿಸಿದರು.
ಪುಣಚ ಗ್ರಾ.ಪಂ.ಅಧ್ಯಕ್ಷೆ ಪ್ರತಿಭಾ ಶ್ರೀಧರ ಶೆಟ್ಟಿ ಅವರು ಮಾತನಾಡಿ, ಪುಣಚ ಗ್ರಾಮದಲ್ಲಿ ನಡೆದ ವಿಜಯೋತ್ಸವದಲ್ಲಿ ಮಾತನಾಡಿದವರು ಹೊರಗಿನವರು. ಅವರು ಏನೇನೋ ಮಾತನಾಡಿ, ಊರಿನಲ್ಲಿ ತಲೆ ಎತ್ತದಂತೆ ಮಾಡಿದ್ದಾರೆ. ಇದು ಬೇಸರವನ್ನುಂಟು ಮಾಡುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಪ್ರಧಾನ ಕಾರ್‍ಯದರ್ಶಿ ಪ್ರವೀಣಚಂದ್ರ ಆಳ್ವ, ಕಾರ್‍ಯದರ್ಶಿ ಉಲ್ಲಾಸ್ ಕೋಟ್ಯಾನ್, ಕಾರ್‍ಯದರ್ಶಿ ರಮಾನಾಥ ವಿಟ್ಲ ಉಪಸ್ಥಿತರಿದ್ದರು.
