ಬಂಟ್ವಾಳ: ವರ್ಷ ಕಳೆದಂತೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಹೀಗಾಗಿ ನದಿಯನ್ನೇ ಆಶ್ರಯಿಸಿರುವವರು ಬೇಸಿಗೆ ಬಂತೆಂದರೆ ಸಾಕು ಆತಂಕ ಪಡುವ ಸ್ಥಿತಿ ಇದೆ. ನದಿಯಲ್ಲಿ ನೀರು ಕಡಿಮೆಯಾದರೆ ಹೆಚ್ಚು ಆತಂಕ ಪಡುವವರೆಂದರೆ ಮಂಗಳೂರಿನ ಜನತೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಮಟ್ಟ ಹೆಚ್ಚಿರುವುದು ಸಮಾಧಾನಕರ ವಿಚಾರ.



ಮಂಗಳೂರಿಗೆ ತುಂಬೆ ಡ್ಯಾಂನಿಂದ ನೀರು ಪೂರೈಕೆಯಾಗುತ್ತಿದ್ದು, ಪ್ರಸ್ತುತ 6 ಮೀ. ನೀರು ನಿಲ್ಲಿಸಲು ಅವಕಾಶವಿರುವ ಡ್ಯಾಂನಲ್ಲಿ ಸದ್ಯಕ್ಕೆ 4.88 ಮೀ. ನೀರು ಇದೆ. ಈ ಬಾರಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿದ್ದ ಪರಿಣಾಮ ನೀರಿನ ತೊಂದರೆ ಬಾರದು ಎಂದು ಅಽಕಾರಿಗಳ ಅಧಿಕಾರಿಗಳ ಅಭಿಪ್ರಾಯ.
ಒಂದು ವೇಳೆ ಡ್ಯಾಂನಲ್ಲಿ ನೀರು ಕಡಿಮೆಯಾದರೂ ಶಂಭೂರಿನಲ್ಲಿ ವಿದ್ಯುತ್ ಉತ್ಪಾದನೆಯ ದೃಷ್ಟಿಯಿಂದ ಅನುಷ್ಠಾನಗೊಂಡಿರುವ ಎಎಂಆರ್ ಡ್ಯಾಂನಲ್ಲಿ ಹೆಚ್ಚಿನ ನೀರು ಸಂಗ್ರಹವಿದೆ. ಕಳೆದ ವರ್ಷ ಈ ಸಮಯದಲ್ಲಿ ಒಂದು ಬಾರಿ ಶಂಭೂರಿನಿಂದ ತುಂಬೆಗೆ ನೀರು ಹರಿಸಲಾಗಿತ್ತು.
ಈ ಬಾರಿ ಎಪ್ರಿಲ್ ತಿಂಗಳು ಬಂದರೂ ಅಂತಹ ಸನ್ನಿವೇಶ ಸೃಷ್ಟಿಯಾಗದೇ ಇರುವುದರಿಂದ ಸದ್ಯಕ್ಕೆ ನೀರಿನ ತೊಂದರೆ ಇರದು. ಇದರ ಜತೆಗೆ ಸಂಜೆಯ ವೇಳೆ ಹನಿ ಮಳೆಯಾಗುತ್ತಿರುವುದರಿಂದ ಮಳೆಯ ಲಕ್ಷಣವೂ ಗೋಚರವಾಗುತ್ತಿದ್ದು, ನೀರಿನ ಆತಂಕವನ್ನು ದೂರ ಮಾಡುತ್ತಿದೆ.












