ಬಂಟ್ವಾಳ: ನೇತ್ರಾವತಿ ನೀರಿನ ಮಟ್ಟ 8.5 ಅಗಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.


ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರ, ತಗ್ಗು ಹಾಗೂ ನೆರೆಪೀಡಿತ ಪ್ರದೇಶಗಳಿಗೆ ಪೊಲೀಸ್ ಅಧಿಕಾರಿಗಳು ಕಟ್ಟೆಚ್ಚರ ವಿಧಿಸಿದ್ದಾರೆ.
ಮುಳುಗಡೆ ಪ್ರದೇಶ, ಜಲಾವೃತ ರಸ್ತೆಗಳಲ್ಲಿ ಜನ ಸಂಚಾರ ಮತ್ತು ವಾಹನವನ್ನು ನಿಷೇಧಿಸಲಾಗಿದ್ದು, ಪೊಲೀಸರು ನಾಕಾಬಂದಿ ಕಲ್ಪಿಸಿದ್ದಾರೆ.
ನೇತ್ರಾವತಿ ನದಿಯ ತೀರ ಪ್ರದೇಶಗಳಿಗೆ ಭೇಟಿ ನೀಡಿದ್ದು, ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರು ಪರಿಸ್ಥಿತಿಯನ್ನು ಖುದ್ದು ಅವಲೋಕನ ನಡೆಸಿದ್ದಾರೆ.
ನದಿ ಆಯಕಟ್ಟಿನ ಸ್ಥಳಗಳಿಗೆ ವಿಶೇಷ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದ್ದು, ಹೆಚ್ಚುವರಿ ಗೃಹ ರಕ್ಷಕ ಸಿಬ್ಬಂದಿಗಳನ್ನು ನಿಯೋಜನೆ ಗೊಳಿಸಲಾಗಿದೆ. ರಾತ್ರಿ ಪಹರೆ ಸಿಬ್ಬಂದಿಗಳನ್ನು ಕೂಡ ನೇಮಕಗೊಳಿಸಲಾಗಿದ್ದು, 24*7 ಸೇವಾ ಕಾರ್ಯಾಚರಣೆ ಪೊಲೀಸರು ಸಿದ್ದರಾಗಿದ್ದಾರೆ.
ನದಿ ನೆರೆಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಈಜುಗಾರರ ತಂಡವನ್ನು ಲಭ್ಯ ಇರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸ್ತವ್ಯ ಇರದಂತೆ ಎಚ್ಚರಿಕೆ ನೀಡಲಾಗಿದ್ದು, ವಾಸ್ತವ್ಯ ಸ್ಥಳಾಂತರಕ್ಕೆ ಕ್ರಮ ಜರಗಿಸಲಾಗಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಪೊಲೀಸ್ ಸಂಚಾರಿ ವಾಹನ ವ್ಯವಸ್ಥೆ ಇದ್ದು, ಸಾರ್ವಜನಿಕ ಈ ಸೇವೆಯನ್ನು ಬಳಸಬಹುದಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ.ನಾಗರಾಜ್ ಅವರು ತಿಳಿಸಿದ್ದಾರೆ.

