ಬಂಟ್ವಾಳ : ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಆತಂಕದ ನಡುವೆಯೂ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆ ವೆನಲಾಕ್ ನ ಅವ್ಯವಸ್ಥೆ ಕುರಿತಾದ ಆಡಿಯೋ ಹರಿದಾಡಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲು ಮಂಗಳವಾರ ತುರ್ತು ಭೇಟಿನೀಡಿದರು.



ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಅಧೀಕ್ಷಕಿ ಸಹಿತ ವಿವಿಧ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿದರು. ಸಂಸದರಿಗೆ ಸೂಕ್ತ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಕರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ವ್ಯವಸ್ಥೆ ಮಾಡಿರುವುದನ್ನು ನಳಿನ್ ಕುಮಾರ್ ಕಟೀಲ್ ಅವರ ಗಮನಕ್ಕೆ ತಂದರು. ಒಬ್ಬ ವ್ಯಕ್ತಿಯಲ್ಲಿ ಮಾತ್ರ ಕರೋನಾ ಪಾಸಿಟಿವ್ ಪತ್ತೆಯಾಗಿದ್ದು ಮತ್ತು ಇನ್ನೊಬ್ಬ ಕೊರೊನಾ ಶಂಕಿತ ವ್ಯಕ್ತಿಯನ್ನು ತೀವ್ರ ನಿಗಾದಲ್ಲಿ ಇಡಲಾಗಿದೆ. ಸುಮಾರು 200 ಜನರನ್ನು ತೀವ್ರ ನಿಗಾ ಘಟಕದಲ್ಲಿ ಇಡುವ ವ್ಯವಸ್ಥೆ ಇದೆ. ಆದ್ದರಿಂದ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲಾಡಳಿತ, ರಾಜ್ಯ, ರಾಷ್ಟ್ರ ಸಂಪೂರ್ಣವಾಗಿ ಜನರ ಆರೋಗ್ಯ ಕಾಳಜಿಗೆ ಕಟಿಬದ್ಧವಾಗಿದ್ದು, ಸುಳ್ಳುವದಂತಿಗಳಿಗೆ ಕಿವಿಗೊಡಬೇಡಿ ಎಂದು ನಳಿನ್ ಕುಮಾರ್ ಕಟೀಲು ಮನವಿ ಮಾಡಿದ್ದಾರೆ.
ಸೋಮವಾರ ವೆನ್ ಲಾಕ್ ಅವ್ಯವಸ್ಥೆ ಕುರಿತು ಆಡಿಯೋ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧಿವೇಶನದ ನಿಮಿತ್ತ ದೆಹಲಿಯಲ್ಲಿ ಇದ್ದರು. ವೆನಲಾಕ್ ಆಸ್ಪತ್ರೆಯ ಬಗ್ಗೆ ಗೊಂದಲ ಪಡುತ್ತಿರುವುದನ್ನು ಅರಿತುಕೊಂಡ ಸಂಸದರು ತಕ್ಷಣ ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿಂದ ತಡಮಾಡದೇ ರಸ್ತೆ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿ ವೆನ್ಲಾಕ್ ಆಸ್ಪತ್ರೆಗೆ ತೆರಳಿದ ನಳಿನ್ ಕುಮಾರ್ ಕಟೀಲ್ ಅವರು ವೆನ್ಲಾಕ್ ನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.












