ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಮನೆಯೊಂದರಲ್ಲಿ ನಾಪತ್ತೆಯಾದ 9 ವರ್ಷ ಪ್ರಾಯದ ಬಾಲಕನ ನಾಪತ್ತೆ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಾಲಕನನ್ನು ಆತನ ಸಹೋದರಿಯೇ ಕೊಲೆ ಮಾಡಿ ಸ್ಟೋರ್ ರೂಂನಲ್ಲಿ ಇಟ್ಟಿದ್ದಳು. ಇಷ್ಟಕ್ಕೂ ಈ ಕೊಲೆಗೆ ಬಾಯ್‌ಫ್ರೆಂಡ್ ಜೊತೆ ಮಾತನಾಡಬೇಡ ಎಂಬುದೇ ಕಾರಣವಾಗಿತ್ತು.

15 ವರ್ಷ ಪ್ರಾಯದ ಸಹೋದರಿ ತನ್ನ ಬಾಯಿಫ್ರೆಂಡ್ ಜೊತೆ ಮೊಬೈಲ್ ಫೊನ್‌ನಲ್ಲಿ ನಿರಂತರ ಮಾತನಾಡುತ್ತಿದ್ದಳು. ಇದಕ್ಕೆ ತಮ್ಮ ಅಡ್ಡಿಪಡಿಸಿದ್ದ. ಇದರ ಕೋಪದಿಂದ ಸಹೋದರಿ ಇಯರ್ ಫೊನ್ ಕೇಬಲ್‌ನಿಂದ ಬಾಲಕನ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಳು. ಬಳಿಕ ಮೃತದೇಹವನ್ನು ಮನೆಯ ಸ್ಟೋರ್ ರೂಂನಲ್ಲಿ ಅಡಗಿಸಿ ಇಟ್ಟಿದ್ದಳು.
ಘಟನೆ ನಡೆದಾಗ ಪಾಲಕರು ಮನೆಯಲ್ಲಿ ಇರಲಿಲ್ಲ. ಮಗ ಕಾಣೆಯಾದ ಹಿನ್ನೆಲೆಯಲ್ಲಿ ಪಾಲಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರಿಗೂ ಬಾಲಕನ ಬಗ್ಗೆ ಮಾಹಿತಿ ದೊರೆತಿರಲಿಲ್ಲ. ಆದರೆ ಮನೆಯ ಸ್ಟೋರ್ ರೂಂನಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಪಾಲಕರು ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.
ಈ ಘಟನೆ ಗುರುವಾರ ನಡೆದಿದ್ದು ಸೋಮವಾರ ಬೆಳಕಿಗೆ ಬಂದಿದೆ. ಬಾಲಕ ಸಾವಿನ ಬಗ್ಗೆ ಮನೆಯವರ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು ಮನೆಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸಹೋದರಿ ತಾನು ಕೊಲೆ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾಳೆ. ಸಹೋದರಿಯನ್ನು ಬಂಧಿಸಿರುವ ಪೊಲೀಸರು ಬಾಲಾಪರಾಧ ಕೇಂದ್ರಕ್ಕೆ ಕಳುಹಿಸಿದ್ದಾರೆ.
