ಮುಂಬಯಿ (ಮಂಗಳೂರು): ಆಕಾಶವಾಣಿ ಮಂಗಳೂರು ಕೇಂದ್ರದ ತುಳು ವಿಭಾಗದ ‘ಸ್ವರಮಂಟಮೆ’ ಕೃತಿ/ ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರ ಕಾರ್ಯಕ್ರಮದ 28ನೆಯ ಸಂಚಿಕೆಯಲ್ಲಿ ಕುಶಾಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ ತುಳು ಕವನ ಸಂಕಲನ ಬಿಡುಗಡೆ ಗೊಂಡಿತು.

ಮಂಗಳೂರು ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ‘ಸ್ವರಮಂಟಮೆ’ ಕೃತಿ, ಧ್ವನಿಸುರುಳಿ ಬಿಡುಗಡೆಯ 28ನೆಯ ಸಂಚಿಕೆಯಲ್ಲಿ ಕುಶಾಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ಅವರ ‘ಪನಿ ಮುತ್ತು ಮಾಲೆ’ ಕೃತಿಯನ್ನು ತುಳು ಕನ್ನಡ ಸಾಹಿತಿ ಸದಾನಂದ ನಾರಾವಿ ಲೋಕಾರ್ಪಣೆ ಮಾಡಿದರು.

“ಕಥೆ, ಕಾದಂಬರಿಗಳನ್ನು ಬರೆದಷ್ಟು ಸುಲಭವಿಲ್ಲ ಕವನಗಳನ್ನು ಹೆಣೆಯುವುದು, ಕವನ ಕಟ್ಟಲು ಅನುಭವದ ಜೊತೆಗೆ ಚತುರತೆ ಹಾಗೂ ತಾಳ್ಮೆ ಬೇಕು ಅಂತಹ ಎಲ್ಲಾ ಗುಣಗಳು ಪಕ್ವವಾಗಿರುವುದು ಈ ಸಂಕಲನದಲ್ಲಿ ಕಾಣಬಹುದು. ಮರೆಯಾಗುತ್ತಿರುವ ಅದೆಷ್ಟೋ ತುಳು ಪದಗಳನ್ನು ಬಳಸಿರುವುದು ಮುಂದಿನ ಪೀಳಿಗೆಗೆ ಭಾಷೆಯನ್ನು ಉಳಿಸಿಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಕನ್ನಡ ಲಿಪಿಯೊಡನೆ ತುಳು ಲಿಪಿಯಲ್ಲೂ ಕವನಗಳು ಅಚ್ಚಾಗಿರುವುದು ಇನ್ನೊಂದು ವಿಶೇಷ” ಎಂದು ಸದಾನಂದ ನಾರಾವಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
“ಒಂದೊಂದು ಕವನ ಕೂಡಾ ವಿಭಿನ್ನವಾಗಿದ್ದು ತುಳು ಆಚಾರ-ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಕೊಟ್ಟಿದೆ, ತುಳು ಲಿಪಿಯಲ್ಲಿ ಕವನಗಳನ್ನು ಬರೆದಿರುವುದು ಹೊಸ ಪ್ರಯತ್ನ” ಎಂದು ವಿದ್ಯಾಶ್ರಿ ಎಸ್.ಉಳ್ಳಾಲ ವಿಮರ್ಶಿಸಿದರು.
ಬಬ್ಬುಕಟ್ಟೆ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ಕಟೀಲು, ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಘಟಕಿ ಸಂಗೀತಾ ಸುರತ್ಕಲ್, ಕನ್ನಡ-ತುಳು ಬರಹಗಾರ್ತಿ ಅಕ್ಷತಾರಾಜ್ ಪೆರ್ಲ, ಗುಲಾಬಿ ಟೀಚರ್ ಬ್ರಹ್ಮರಕೂಟ್ಲು, ವಾಸು ಕುಲಾಲ್ ಮತ್ತು ಜಿ.ವಿ.ಎಸ್ ಉಳ್ಳಾಲ ಮುಖ್ಯ ಅತಿಥಿಗಳಾಗಿ ಶುಭಾಶಯ ಕೋರಿದರು.
ಸಹಾಯಕ ನಿಲಯ ನಿರ್ದೇಶಕರಾದ ಉಷಾಲತಾ ಸರಪಾಡಿ ಸ್ವಾಗತಿಸಿ ‘ಆಕಾಶವಾಣಿ ಕೇಳುಗರ ಸಂಖ್ಯೆ ಹೆಚ್ಚಾಗುವಲ್ಲಿ ತುಳು ವಿಭಾಗದ ಪಾತ್ರ ಕೂಡಾ ಮಹತ್ವದ್ದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
‘ನಮ್ಮ ಮೂಲ ನೆಲಸಂಸ್ಕೃತಿ ಉಳಿಸುವುದು ಜವಾಬ್ದಾರಿ’ ಎಂದ ಮಂಗಳೂರು ಆಕಾಶವಾಣಿ ಕೇಂದ್ರದ ತುಳು ಕಾರ್ಯಕ್ರಮ ವಿಭಾಗ ಮುಖ್ಯಸ್ಥ ಡಾ| ಸದಾನಂದ ಪೆರ್ಲ ಕಾರ್ಯಕ್ರಮವನ್ನು ಸಂಘಟಿಸಿ ನಿರೂಪಿಸಿದರು. ತಾಂತ್ರಿಕ ವಿಭಾಗದ ಚಂದ್ರಶೇಖರ ಶೆಟ್ಟಿ, ಪ್ರಕಾಶ್ ಬಿ.ಸಿ.ರೋಡು, ರಾಧಾ ಪ್ರಭಾಕರನ್, ಮೋಹನದಾಸ ಮರೋಳಿ ಹಾಗೂ ಉದ್ಘೋಷಕರಾದ ರಾಧಾಕೃಷ್ಣ ಶೆಟ್ಟಿ ಬಾಯಾರು ಸಹಕರಿಸಿದರು.

