ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ.


ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ರೋಗ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಕಿ ಪಾಕ್ಸ್ ಇರುವುದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ)ಯು ಖಚಿತ ಪಡಿಸಿದೆ. ಇವರು ಮೂಲತಃ ಕಾರ್ಕಳದವರಾಗಿದ್ದು, ಹಲವು ವರ್ಷಗಳಿಂದ ದುಬಾೖಯಲ್ಲಿ ನೆಲೆಸಿದ್ದರು
ದುಬಾೖಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮರಳಿದವರಿಗೆ ಜ್ವರ, ಮೈಮೇಲೆ ದದ್ದು ಇತ್ಯಾದಿ ರೋಗ ಲಕ್ಷಣಗಳಿದ್ದವು. ಅವರನ್ನು ಪ್ರತ್ಯೇಕ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ನೀಡಿದ್ದು, ಗುಣ ಹೊಂದಿದ್ದಾರೆ. ಈ ಸೋಂಕು ಹರಡುವಿಕೆ ಅತೀ ಕಡಿಮೆ ಇದೆ. ಆದರೆ ಚರ್ಮದ ಮೇಲೆ ಗುಳ್ಳೆಗಳ ಜತೆಗೆ ಜ್ವರ, ತಲೆನೋವು, ಮೈಕೈ ನೋವು, ಶೀತ, ಗಂಟಲು ನೋವು, ಕೆಮ್ಮು ಇದ್ದರೆ ಕೂಡಲೇ ಸಮೀಪದ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.