ಬಂಟ್ವಾಳ: ನಮೋ: ಸೆಕೆಂಡ್ ಇನ್ನಿಂಗ್ಸ್ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ್ಯಾದ್ಯಂತ ವಿಶೇಷ ಕಾರ್ಯಕ್ರಮಗಳ ಮೂಲಕ ಸಂಭ್ರಮ ಆಚರಣೆ ನಡೆಯಿತು.

ವಿಶೇಷ ಪೂಜೆ, ಭಜನೆ, ಪುಸ್ತಕ ವಿತರಣೆ, ಚಹಾಕೂಟ, ಭೋಜನ ವ್ಯವಸ್ಥೆ, ಪ್ರಯಾಣಿಕರಿಗೆ ದಿನ ಪ್ರಯಾಣ ಉಚಿತ ಸೇವೆ ಹೀಗೆ ವಿಭಿನ್ನ , ವಿನೂತನ ರೀತಿಯಲ್ಲಿ ಸಂಭ್ರಮ ಆಚರಣೆಯಲ್ಲಿ ತೊಡಗಿಕೊಂಡರು.
ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಎರಡನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಸಂಭ್ರಮದಲ್ಲಿ ಸಂಜೆ 5 ಗಂಟೆಯಿಂದ ಬಿಸಿರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನ ದಲ್ಲಿ ಭಜನೆ ಕಾರ್ಯಕ್ರಮ ನಡೆಯಿತು.
ಬಳಿಕ 7.30 ಕ್ಕೆ ವಿಶೇಷ ಸರ್ವ ಸೇವೆ ಪೂಜೆಯನ್ನು ಬಂಟ್ವಾಳ ಬಿಜೆಪಿ ವತಿಯಿಂದ , ಬಂಟ್ವಾಳ ಶಾಸಕ ರಾಜೇಶ್ ನಾಯಕ್ ನೇತ್ರತ್ವದಲ್ಲಿ ನಡೆಸಲಾಯಿತು.
ಸಂಜೆಯ ವೇಳೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯ ಎದುರಲ್ಲಿ ಬಿಜೆಪಿ ಕಾರ್ಯಕರ್ತರು ಚಹ, ಪಕೋಡಾ ವಿತರಿಸಲು ಆರಂಭಿಸಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ, ಪಕ್ಷದ ಹಿರಿಯರಾದ ಜಿ.ಆನಂದ, ಜಿಪಂ ಸದಸ್ಯೆ ಕಮಲಾಕ್ಷಿ ಪೂಜಾರಿ, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಪಕ್ಷ ಪ್ರಮುಖರಾದ ರಾಮದಾಸ ಬಂಟ್ವಾಳ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ರಂಜಿತ್ ಮೈರ, ರಮಾನಾಥ ರಾಯಿ, ಸುದರ್ಶನ ಬಜ ಸಹಿತ ಪುರಸಭೆ ಸದಸ್ಯರು, ಕಾರ್ಯಕರ್ತರು, ಮೋದಿ ಅಭಿಮಾನಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ ಹಲವು ಕಡೆಗಳಲ್ಲಿ ಎಲ್.ಇ.ಡಿ.ಪರದೆಯ ಮೂಲಕ ಪ್ರಮಾಣ ವಚನ ಕಾರ್ಯಕ್ರಮ ದ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.