ಬಂಟ್ವಾಳ, ಜು. 6: ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಸ್ತುತ ಬಿ.ಸಿ.ರೋಡ್ ನಗರ ಸುಂದರೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬಿ.ಸಿ.ರೋಡಿನ ನಾರಾಯಣಗುರು ವೃತ್ತದಿಂದ ಕೈಕಂಬದ ವರೆಗಿನ 15 ಕೋ.ರೂ.ಗಳ ಕಾಮಗಾರಿಗೆ ಆಷಾಢ ಮುಗಿದ ತತ್‍ಕ್ಷಣ ಚಾಲನೆ ನೀಡಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿ ಹೇಳಿದರು.

ದ.ಕ.ಸಂಸದ ನಳಿನ್‍ಕುಮಾರ್ ಕಟೀಲು ಅವರ ಸಮ್ಮುಖದಲ್ಲಿ ಶನಿವಾರ ಮಂಗಳೂರಿನಲ್ಲಿ ಬಿ.ಸಿ.ರೋಡ್ ನಗರ ಸುಂದರೀಕರಣದ ಸಮಾಲೋಚನಾ ಸಭೆಯ ಕುರಿತು ಬಂಟ್ವಾಳದ ತಮ್ಮ ಕಚೇರಿಯಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದರು.
ವಿನ್ಯಾಸಕ ಎಂಜಿನಿಯರ್ ಧರ್ಮರಾಜ್ ಅವರು ಸುಂದರೀಕರಣದ ಕುರಿತು ಯೋಜನೆ ರೂಪಿಸುತ್ತಿದ್ದು, ಬಹುತೇಕ ಕಾಮಗಾರಿಗಳಿಗೆ ಪ್ರಾಯೋಜಕರು ಮುಂದೆ ಬಂದಿದ್ದಾರೆ. ಮಂಗಳೂರಿನ ಸಭೆಯಲ್ಲಿ ಹೆದ್ದಾರಿ ಎಂಜಿನಿಯರ್‍ಗಳು ಸಹಿತ ಸಾಕಷ್ಟು ಮಂದಿ ಉಪಸ್ಥಿತರಿದ್ದು, ತಮ್ಮ ಸಲಹೆಗಳನ್ನು ನೀಡಿದ್ದಾರೆ.
ಗಣ್ಯರ ಸಮಿತಿ ರಚನೆ
ಬಿ.ಸಿ.ರೋಡು ಸುಂದರೀಕರಣದ ಜತೆಗೆ ಬಂಟ್ವಾಳ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದೆ ಬಂಟ್ವಾಳದ ಗಣ್ಯರ ಸಮಿತಿಯೊಂದನ್ನು ರಚಿಸಿಕೊಂಡು ಅವರ ಸಲಹೆ ಪಡೆಯುವ ಯೋಚನೆಯೂ ಇದೆ. ಮುಂದಿನ ದಿನಗಳಲ್ಲಿ ಸಮಿತಿಯ ಹೆಸರನ್ನು ಪ್ರಕಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಬಿ.ದೇವದಾಸ್ ಶೆಟ್ಟಿ, ದೇವಪ್ಪ ಕರ್ಕೇರ ಉಪಸ್ಥಿತರಿದ್ದರು.